ಬೆಂಗಳೂರು: 21ನೇ ಶತಮಾನದಲ್ಲಿ ಭಾರತದಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿದ್ದು, ಅವು ‘ವಿಕಸಿತ ಭಾರತ’ ಅಡಿಪಾಯವನ್ನು ಬಲಪಡಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.
‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರು ರಾಜಕೀಯಕ್ಕೆ ಸೇರಲು ಸ್ವಾತಂತ್ರ್ಯ ದಿನಾಚರಣೆಯಂದು ಕೊಟ್ಟಿದ್ದ ಕರೆ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ದೊಡ್ಡ ಸಂಖ್ಯೆಯಲ್ಲಿ ಯುವಜನತೆ ರಾಜಕೀಯಕ್ಕೆ ಸೇರಲು ಸಿದ್ಧರಿದ್ದಾರೆ. ಅವರಿಗೆ ಸರಿಯಾದ ಅವಕಾಶ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರು, ಸಮಾಜದ ಎಲ್ಲ ವರ್ಗದ ಅಸಂಖ್ಯಾತ ಜನರು ಭಾಗವಹಿಸಿದ್ದರು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮೆಲ್ಲವನ್ನು ಅರ್ಪಿಸಿಕೊಂಡರು. ವಿಕಸಿತ ಭಾರತದ ಕಲ್ಪನೆಯನ್ನು ಮುಟ್ಟಲು ನಾವು ಮಗದೊಮ್ಮೆ ಅದೇ ಮನೋಭಾವವನ್ನು ಪುನರುಜ್ಜೀವನಗೊಳಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳನ್ನು ಮುನ್ನಡೆಸುತ್ತಿರುವ ಹಲವಾರು ಯುವ ಉದ್ಯಮಿಗಳನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿವಿಧ ಸುಧಾರಣೆಗಳಿಂದ ದೇಶದ ಯುವಕರು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸಾಧನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯ ಬಲಗೊಳ್ಳುತ್ತಿದೆ. ಈ ಆಗಸ್ಟ್ 23 ರಂದು, ನಾವೆಲ್ಲರೂ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದ್ದೇವೆ. ಇಂದು ಯುವಕರು ಸ್ಟಾರ್ಟ್‌ಅಪ್‌ಗಳ ಮೂಲಕ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆಂದು ಹೇಳಿದರು.
Advertisement