ಚೆನ್ನೈ: ಕಳೆದೊಂದು ವಾರದಿಂದ ತಾಪಮಾನ ಕುಸಿತಕ್ಕೆ ಕಾರಣವಾಗಿದ್ದ ಫೆಂಗಲ್ ಚಂಡಮಾರುತ ಕೊನೆಗೂ ನಿನ್ನೆ ರಾತ್ರಿ ತಮಿಳುನಾಡು ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಿದ್ದು, ಭಾರಿ ಮಳೆ ಸುರಿಸುತ್ತಿದೆ.
ತಮಿಳುನಾಡಿನ ಕರಾವಳಿಗೆ ಫೆಂಗಲ್ ಚಂಡಮಾರುತ ಶನಿವಾರ ಅಪ್ಪಳಿಸಿದ್ದು, ರಾಜಧಾನಿ ಚೆನ್ನೈ ಸೇರಿದಂತೆ ಹಲವು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಶುಕ್ರವಾರ ಸಂಜೆಯಿಂದಲೇ ಭಾರಿ ಮಳೆ ಆರಂಭವಾಗಿದ್ದು, ಶನಿವಾರ ಚಂಡಮಾರುತ ಅಪ್ಪಳಿಸಿದ ನಂತರ ಬಿರುಸು ಪಡೆದಿದೆ. ಗಂಟೆಗೆ 70–100 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹಲವಾರು ವಿಮಾನಗಳು ರದ್ದಾದ ಕಾರಣ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.
ವಿಮಾನ ನಿಲ್ದಾಣ ಸ್ಥಗಿತ
ಇನ್ನು ಭಾರಿ ಮಳೆ ಮತ್ತು ಭಾರಿ ಗಾಳಿಯ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಸೇವೆಗಳೂ ಕೂಡ ಬಹುತೇಕ ಅಸ್ತವ್ಯಸ್ಥಗೊಂಡಿದ್ದು, ದಕ್ಷಿಣ ರೈಲ್ವೆ ಸೇವೆಗಳಲ್ಲಿ ಬದಲಾವಣೆಗಳನ್ನು ಘೋಷಿಸಿದೆ.
ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ರೈಲು ಸೇವೆ ಅಸ್ತವ್ಯಸ್ಥದಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಭಾಗವು ಜಲಾವೃತವಾಗಿದ್ದು, ವಿಮಾನ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.
ಜನವಸತಿ ಪ್ರದೇಶಗಳೇ ಜಲಾವೃತ
ಜನವಸತಿ ಅಧಿಕವಿರುವ ಪ್ರದೇಶಗಳಾದ ಮಾಂಬಳಮ್, ಕೋಡಂಬಾಕಂ, ಮಾದಿಪಕ್ಕಂ, ಕೀಳಕಟ್ಟಳೈ, ಅಶೋಕನಗರ, ನುಂಗಂಬಾಕಂ, ಆಳ್ವಾರ್‌ಪೇಟ್, ಪೆರಂಬೂರು ಹಾಗೂ ಪುರಸಾಯಿವಲ್ಕಮ್‌ಗಳಲ್ಲಿ ರಸ್ತೆ, ಮನೆಗಳಲ್ಲಿ ನೀರು ನಿಂತು ಹೆಚ್ಚು ತೊಂದರೆಯಾಗಿದೆ.
ಜನರು ಮನೆಯಿಂದ ಹೊರಬರಲಾರದೇ ಸಂಕಷ್ಟ ಅನುಭವಿಸಿದರು. ನೆರೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ರೈಲ್ವೆ ಸೇವೆಗಳಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಎಟಿಎಂ ನಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ಸಾವು!
ಚೆನ್ನೈನಲ್ಲಿ ಚಂಡಮಾರುತದ ಪರಿಣಾಮ ಉಂಟಾಗಿರುವ ಪ್ರವಾಹಕ್ಕೆ ಎಟಿಎಂನಲ್ಲಿ ವಿದ್ಯುತ್ ಪ್ರವಹಿಸಿದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ವ್ಯಕ್ತಿಯ ದೇಹ ನೀರಿನಲ್ಲಿ ತೇಲುತ್ತಿದ್ದು, ಸ್ಥಳೀಯರು ದೇಹವನ್ನು ಹೊರತೆಗೆದರು.
ಫ್ಲೈ ಓವರ್ ಗಳ ಮೇಲೆ ಕಾರು ಪಾರ್ಕಿಂಗ್
ಇನ್ನು ವ್ಯಾಪಕ ಮಳೆಯಿಂದಾಗಿ ಮನೆ ಮತ್ತು ರಸ್ತೆಗಳು ಜಲಾವೃತವಾಗಿದ್ದು, ಉತ್ತರ ಚೆನ್ನೈನ ವೇಲಾಚೆರಿ, ಪಳ್ಳಿಕರಣೈ, ಮೇದವಕ್ಕಂ ಹಾಗೂ ಮಿಂಟ್ ಜಂಕ್ಷನ್‌ನ ಫ್ಲೈಒವರ್‌ಗಳನ್ನೇ ಜನರು ಕಾರು ಪಾರ್ಕಿಂಗ್ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ನಗರದ ಹೊರವಲಯದ ಅನೇಕ ಪ್ರದೇಶಗಳಲ್ಲಿಯೂ ಮಳೆಯಿಂದ ಅನಾಹುತಗಳು ಸಂಭವಿಸಿವೆ.
ಬೀಚ್ ಪ್ರವೇಶ ನಿಷೇಧ
ಇನ್ನು ಭಾರಿ ಮತ್ತು ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಅಲೆಗಳು ಪ್ರಕ್ಷುಬ್ಧವಾಗಿದ್ದು ಬೀಚ್ ಗೆ ತೆರಳದಂತೆ ಜನರಿಗೆ ನಿಷೇಧ ಹೇರಲಾಗಿದೆ. ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಸಿದ್ಧ ಬೀಚ್‌ಗಳಿಗೆ ಜನಪ ಪ್ರವೇಶವನ್ನು ನಿರ್ಬಂಧಿಸಲು ಬ್ಯಾರಿಕೇಡ್‌ಗಳನ್ನು ಹಾಕ ಮುಚ್ಚಲಾಗಿದೆ. ಅಲ್ಲದೆ ಮೀನುಗಾರಿಕಾ ಸಿಬ್ಬಂದಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಇದೇ ವೇಳೆ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ರಾಜ್ಯ ಸರ್ಕಾರದ ವಿರುದ್ಧವೂ ತಮಿಳುನಾಡು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಚಂಡಮಾರುತದ ಕುರಿತು ಮೊದಲೇ ಮಾಹಿತಿ ಇದ್ದರೂ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಚಂಡಮಾರುತ ಪರಿಣಾಮ ಎದುರಿಸಲು ಸರ್ಕಾರ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸುತ್ತಿದ್ದಾರೆ.
Advertisement