
ಸಂಭಾಲ್: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೊಲೆರೊ ವಾಹನ ಢಿಕ್ಕಿಯಾದ ಬೈಕ್ ಅನ್ನು ಬರೊಬ್ಬರಿ ಎರಡು ಕಿಲೋ ಮೀಟರ್ ವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಕೆಳಗೆ ಬಿದ್ದ ಬೈಕ್ನಿಂದ ಬೆಂಕಿಯ ಕಿಡಿ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ, ಕಾರು ಚಾಲಕ ರಭಸದಿಂದ ಚಾಲನೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಭಲ್ನ ಕೊಟ್ವಾಲಿ ಪ್ರದೇಶದಲ್ಲಿನ ಮೊರದಬಾದ್ನ ವಜಿದ್ಪುರಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂಜೆ ಈ ಅಪಘಾತ ನಡೆದಿದ್ದು, ಬೊಲೆರೋ ಕಾರಿನ ಮೇಲೆ ಗ್ರಾಮ್ ಪ್ರಧಾನ್ ಎಂಬ ಹೆಸರಿನ ಬಿಜೆಪಿ ಸ್ಟಿಕರ್ ಕಂಡುಬಂದಿದ್ದು, ಈ ಭಯಾನಕ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೈಕರ್ ಸಾವು
ಇನ್ನು ಈ ಘಟನೆಯಲ್ಲಿ ಬೈಕರ್ ಸಾವನ್ನಪ್ಪಿದ್ದು, ಸಾವಿಗೀಡಾದ ವ್ಯಕ್ತಿಯನ್ನು ಮೊರ್ದಾಬಾದ್ ಜಿಲ್ಲೆಯ ನಿವಾಸಿ ಸುಖ್ವೀರ್ (50) ಎಂದು ಗುರುತಿಸಲಾಗಿದೆ. ಸುಖ್ನೀರ್ ಭಾನುವಾರ ಮಾವನ ಮನೆಯಿಂದ ಸಂಭಲ್ನ ಹಯತ್ನಗರದಲ್ಲಿರುವ ತನ್ನ ಮನೆಗೆ ಮರಳುತ್ತಿದ್ದರು.
ಈ ವೇಳೆ ಮೊರದಾಬಾದ್ ರಸ್ತೆಯಲ್ಲಿ ಎಸ್ಯುವಿ ವಾಹನ ಡಿಕ್ಕಿಯಾಗಿದೆ. ಆದರೆ ಬಳಿಕ ಕಾರು ಚಾಲಕ ಬೈಕ್ ಮತ್ತು ಸುಖ್ವಿರ್ ಸಮೇತ ಎಳೆದುಕೊಂಡು ಹೋಗಿದ್ದು, ಸುಮಾರು 2 ಕಿ.ಮೀ ದೂರದಲ್ಲಿ ಬೈಕ್ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಖ್ವೀರ್ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಖವೀರ್‌ರನ್ನು ಸಂಭಾಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಂದ ಅವರನ್ನು ಮೊರಾದಾಬಾದ್‌ಗೆ ಕರೆದೊಯ್ಯಲಾಯಿತು. ಬಳಿಕ ಸುಖ್ವೀರ್ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಅವರು ಸೋಮವಾರ ನಿಧನರಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆ ಕುರಿತು ಮಾತಾಡಿರುವ ಪೊಲೀಸ್ ಅಧಿಕಾರಿ ಅನುಜ್ ಕುಮಾರ್, ಹೃದಯಹೀನ ಕೃತ್ಯ ಎಸಗಿರುವ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಸ್ಯುವಿಯನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement