ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ

'ಕಾಂಗ್ರೆಸ್ ನಡೆ ಫೆಡರಲಿಸಂ ತತ್ವಗಳಿಗೆ ವಿರುದ್ಧ, ರಾಷ್ಟ್ರವಿರೋಧಿ, ಭರವಸೆ ಈಡೇರಿಸಲಾಗದೇ ಕೇಂದ್ರದ ವಿರುದ್ಧ ಆರೋಪ': ಬಿಜೆಪಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಅವಾಸ್ತವಿಕ ಭರವಸೆಗಳನ್ನು ಈಡೇರಿಸಲಾಗದೇ ಕೇಂದ್ರ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.

ನವದೆಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಅವಾಸ್ತವಿಕ ಭರವಸೆಗಳನ್ನು ಈಡೇರಿಸಲಾಗದೇ ಕೇಂದ್ರ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರವು ತನ್ನ ಕೊಡುಗೆಗೆ ಅನುಗುಣವಾಗಿ ಕೇಂದ್ರಸರ್ಕಾರದಿಂದ ಹಣವನ್ನು ಪಡೆಯುತ್ತಿಲ್ಲ ಎಂಬ ಆರೋಪದ ಬಗ್ಗೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದ್ದು, ಈ ವಾದವು ಫೆಡರಲಿಸಂ ವಿರುದ್ಧ ಮಾತ್ರವಲ್ಲ ಬದಲಿಗೆ "ರಾಷ್ಟ್ರ ವಿರೋಧಿ" ಎಂದು ಹೇಳಿದೆ. 

ಕಾಂಗ್ರೆಸ್ ನಾಯಕರ ದೆಹಲಿ ಚಲೋ ಪ್ರತಿಭಟನೆಯನ್ನು ವಿರೋಧಿಸಿ ಕರ್ನಾಟಕ ಬಿಜೆಪಿಯ ಹಲವು ಸಂಸದರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ ನಾಯಕರು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಚುನಾವಣೆಗೆ ಮುನ್ನ ಬಡವರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸಾಕಷ್ಟು ಅಕ್ಕಿ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅರಿತು ಕೇಂದ್ರ ಸರ್ಕಾರವನ್ನು ದೂಷಿಸಲು ಪ್ರಾರಂಭಿಸಿದೆ ಎಂದು ಆರೋಪಿಸಿದರು. 

ರಾಜ್ಯದ ಅಭಿವೃದ್ಧಿಗೆ ನಿಧಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೆಲವು ತಿಂಗಳ ಹಿಂದೆ ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ವಿವಿಧ ಖಾತರಿಗಳಿಂದ ಉಂಟಾದ ಆರ್ಥಿಕ ಹೊರೆಯಿಂದ ಆದಾಯವನ್ನು ಪಡೆಯಲು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಇದೀಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಸಂಪೂರ್ಣ "ಸಂಪೂರ್ಣ ರಾಜಕೀಯ ಗಿಮಿಕ್" ಆಗಿದೆ. ಏಕೆಂದರೆ ಕಾಂಗ್ರೆಸ್ ತರಾತುರಿಯಲ್ಲಿ ಮತ್ತು ಬೇಜವಾಬ್ದಾರಿಯಿಂದ ನೀಡಿದ ಭರವಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ತಮ್ಮ ‘ನಾಟಕ’ವನ್ನು ನಿಲ್ಲಿಸಿ ರಾಜ್ಯಕ್ಕೆ ಹಿಂತಿರುಗಿ ಜನರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಅಂತೆಯೇ ಮುಂದುವರೆದು, ಕಾಂಗ್ರೆಸ್ ನೇತೃತ್ವದ ಯುಪಿಎ 2004-14ರ ಅವಧಿಯಲ್ಲಿ ರಾಜ್ಯದ ಒಟ್ಟು ತೆರಿಗೆ ಹಂಚಿಕೆ 81,795 ಕೋಟಿ ರೂ.ಗಳಾಗಿದ್ದು, 2014-24ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅದು ಶೇ.250 ರಷ್ಟು ಜಿಗಿದು 2,85,452 ಕೋಟಿ ರೂ.ಗೆ ಏರಿಕೆಯಾಗಿದೆ. ಅನುಗುಣವಾದ ಅವಧಿಯಲ್ಲಿ 60,779 ಕೋಟಿ ರೂ. ಮತ್ತು 2,08,832 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇಂದು ಮೋದಿ ಸರ್ಕಾರದ ನೀತಿಗಳಿಂದಾಗಿ ಕರ್ನಾಟಕವು ಅತಿ ಹೆಚ್ಚು ಎಫ್‌ಡಿಐ ಪಡೆಯುತ್ತಿದೆ. ಆದರೂ ಮುಖ್ಯಮಂತ್ರಿಗಳು ಸುಳ್ಳು ಹೇಳಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಕಾಂಗ್ರೆಸ್ ನ ಈ ವಾದವು ಫೆಡರಲಿಸಂನ ತತ್ವಗಳಿಗೆ ವಿರುದ್ಧವಾಗಿದ್ದು, ಇದು ಅತ್ಯಂತ ರಾಷ್ಟ್ರವಿರೋಧಿಯಾಗಿದೆ. ಕಾಂಗ್ರೆಸ್ ದೇಶದ ಮೂಲ ತುಕ್ಡೆ-ತುಕ್ಡೆ ಪಕ್ಷವಾಗಿದೆ. ಭಾರತದ ವಿಭಜನೆಗೆ ಅವರೇ ಹೊಣೆಗಾರರು. ಅದೇ ಪಕ್ಷ ಇಂದು ಮತ್ತೊಮ್ಮೆ ಪ್ರತ್ಯೇಕತಾವಾದ ಮತ್ತು ವಿಭಜನೆಯ ಧ್ವನಿಯಲ್ಲಿ ಮಾತನಾಡುತ್ತಿದೆ. ಇದು ಅದರ ಡಿಎನ್‌ಎಯಲ್ಲಿ ಅಂತರ್ಗತವಾಗಿರುತ್ತದೆ. ದೇಶದ ಜನರು ಮತ್ತು ರಾಜ್ಯವು ಕಾಂಗ್ರೆಸ್ ವಾದವನ್ನು ತಿರಸ್ಕರಿಸುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

ಅಂದಹಾಗೆ ಇಂದಿನ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಮತ್ತು ಎಸ್ ಮುನಿಸ್ವಾಮಿ ಸೇರಿದಂತೆ ಇತರೆ ನಾಯಕರು ಇದ್ದರು.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ಮುಖಂಡರು ಬುಧವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದ ಹಲವು ಸಂಸದರು, ಸಚಿವರು, ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com