ಒಡಿಶಾ: ರಾಜವಂಶಸ್ಥೆ, 10 ಬಾರಿ ಶಾಸಕಿಯಾಗಿದ್ದ ಸುಜ್ಞಾನ ಕುಮಾರಿ ದೇವ್‌ ನಿಧನ

ಬಿಜು ಜನತಾ ದಳ (ಬಿಜೆಡಿ) ನಾಯಕಿ ಹಾಗೂ 10 ಬಾರಿ ಶಾಸಕಿಯಾಗಿದ್ದ ವಿ.ಸುಜ್ಞಾನ ಕುಮಾರಿ ದೇವ್‌ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.
ಸುಜ್ಞಾನ ಕುಮಾರಿ ದೇವ್‌ ನಿಧನ
ಸುಜ್ಞಾನ ಕುಮಾರಿ ದೇವ್‌ ನಿಧನ

ಭುವನೇಶ್ವರ್: ಬಿಜು ಜನತಾ ದಳ (ಬಿಜೆಡಿ) ನಾಯಕಿ ಹಾಗೂ 10 ಬಾರಿ ಶಾಸಕಿಯಾಗಿದ್ದ ವಿ.ಸುಜ್ಞಾನ ಕುಮಾರಿ ದೇವ್‌ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ.

'ಖಲ್ಲಿಕೋಟೆ' ರಾಜಮನೆತನಕ್ಕೆ ಸೇರಿದ ಅವರಿಗೆ 87 ವರ್ಷ ವಯಸ್ಸಾಗಿತ್ತು. ಸುಜ್ಞಾನ ಕುಮಾರಿ ದೇವ್‌ ಅವರು ಮಧ್ಯರಾತ್ರಿ 1ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೇರಿದಂತೆ ಪಕ್ಷದ ಹಲವು ಮುಖಂಡರು ಶುಕ್ರವಾರ ರಾತ್ರಿಯಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ದೇವ್‌ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಚೆನ್ನೈನಿಂದ ಭುವನೇಶ್ವರಕ್ಕೆ ಇಂದು ಸಂಜೆ ತರಲಾಗುತ್ತದೆ. ರಾಜಮನೆತನದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ. ಪಾರ್ಥಿವ ಶರೀರವನ್ನು ಗಂಜಾಂ ಜಿಲ್ಲೆಯ ಖಲ್ಲಿಕೋಟೆಗೆ ಕೊಂಡೊಯ್ಯುವ ಮುನ್ನ ಒಡಿಶಾ ವಿಧಾನಸಭೆ ಆವರಣಕ್ಕೆ ತರಲಾಗುವುದು ಎಂದು ಹಣಕಾಸು ಸಚಿವ ಬಿ.ಕೆ.ಅರುಖಾ ತಿಳಿಸಿದ್ದಾರೆ.

1963ರಲ್ಲಿ ಮೊದಲ ಬಾರಿಗೆ ಒಡಿಶಾ ವಿಧಾನಸಭೆ ಪ್ರವೇಶಿಸಿದ್ದ ದೇವ್‌, ಖಲ್ಲಿಕೋಟೆಯಿಂದ ಎಂಟು ಬಾರಿ ಮಮತ್ತು ಕವಿಸೂರ್ಯನಗರ್‌ ಕ್ಷೇತ್ರದಿಂದ ಎರಡು ಸಲ ಆಯ್ಕೆಯಾಗಿದ್ದರು. 1963, 1974, 1977, 1985, 1990, 1995, 2000, 2004, 2009 ಮತ್ತು 2014ರ ಚುನಾವಣೆಗಳಲ್ಲಿ ಅವರು ಚುನಾಯಿತರಾಗಿದ್ದರು. ಚೆನ್ನೈ ಮೂಲದ ದೇವ್‌ ಅವರು, ಖಲ್ಲಿಕೋಟೆಯ ರಾಜವಂಶಸ್ಥ ಪೂರ್ಣ ಚಂದ್ರ ಮರ್ದರಾಜ್‌ ದೇವ್‌ ಅವರನ್ನು ವಿವಾಹವಾಗಿದ್ದರು.

ಪಕ್ಷದ ರಾಜ್ಯ ಕೇಂದ್ರ ಕಚೇರಿ 'ಶಂಖ ಭವನ'ದಲ್ಲಿ ಮೃತರಿಗೆ ಗೌರವ ಸಮರ್ಪಿಸಿರುವ ಪಟ್ನಾಯಕ್‌, 'ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರಾಗಿದ್ದ ಅವರು, ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು. ಖಲ್ಲಿಕೋಟೆ ಮತ್ತು ಕವಿಸೂರ್ಯನಗರ ಕ್ಷೇತ್ರಗಳನ್ನು ಪ್ರತಿನಿಧಿಸಿ ಸಾರ್ವಜನಿಕ ಸೇವೆಯಲ್ಲಿ ಚಾಪು ಮೂಡಿಸಿದ್ದಾರೆ. 10 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖಿತ ಕುಟುಂಬದವರ ಪರವಾಗಿ ಸಂತಾಪ ಸೂಚಿಸುತ್ತೇನೆ' ಎಂದು ಟ್ವೀಟ್‌ ಮಾಡಿದ್ದಾರೆ.

ಒಡಿಶಾ ರಾಜ್ಯಪಾಲ ರಘುಬರ್ ದಾಸ್‌, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಇನ್ನೂ ಹಲವು ಗಣ್ಯರು ದೇವ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com