ಗೋಲಾಘಾಟ್(ಅಸ್ಸಾಂ): ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಪ್ರಯಾಣಿಕರನ್ನು ಹೊತ್ತ ಬಸ್ ಗೋಲಘಾಟ್ ಜಿಲ್ಲೆಯ ಕಮರ್ಬಂಧ ಪ್ರದೇಶದಿಂದ ತಿಲಿಂಗ ಮಂದಿರದ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಲಿಜನ್ ಎಂಬ ಪ್ರದೇಶದಲ್ಲಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಜೋರ್ಹತ್ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಬರುತ್ತಿತ್ತು. ಈ ವೇಳೆ ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಗೋಲಾಘಾಟ್ ಎಸ್‌ಪಿ ರಾಜೇನ್ ಸಿಂಗ್ ಅವರು ಹೇಳಿದ್ದಾರೆ.
ಘಟನಾ ಸ್ಥಳದಿಂದ 10 ಶವಗಳನ್ನು ಹೊರತೆಗೆಯಲಾಗಿದ್ದು, ಮೃತದೇಹಗಳನ್ನು ದೆರ್ಗಾಂವ್ ಸಿಎಚ್‌ಸಿಗೆ ಕಳುಹಿಸಲಾಗಿದೆ. 27 ಗಾಯಾಳುಗಳನ್ನು ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ, ಈ ವೇಳೆ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.
ಇದರಂತೆ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿರುವ 25 ಮಂದಿಯ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಿಎಂ ಸಂತಾಪ
ಘಟನೆ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ಸ್ಥಳೀಯ ಆಡಳಿತ ಮಂಡಳಿಯು ಎಲ್ಲಾ ಅಗತ್ಯ ಬೆಂಬಲವನ್ನು ನೀಡುತ್ತಿದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹೇಳಿದ್ದಾರೆ.
Advertisement