ಅಯೋಧ್ಯೆಯ ರಾಮ ಮಂದಿರ ಸ್ಫೋಟಿಸುವ ಬೆದರಿಕೆ: ಬಿಹಾರದ ವ್ಯಕ್ತಿ ಬಂಧನ

ಸೋಮವಾರ ಉದ್ಘಾಟನೆಯಾಗುತ್ತಿರುವ ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಿಹಾರದ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಸೋಮವಾರ ಉದ್ಘಾಟನೆಯಾಗುತ್ತಿರುವ ಅಯೋಧ್ಯೆಯ ರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬಿಹಾರದ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಳೆ ಅಂದರೆ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳೂ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲೇ ದೇಗುಲವನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಕ್ಕಾಗಿ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 21 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಪಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್‌ನಲ್ಲಿರುವ ತನ್ನ ಮನೆಯಿಂದಲೇ ಕರೆ ಮಾಡಿದ ಇಂತೆಖಾಬ್ ಆಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಅರಾರಿಯಾದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, "ಆ ವ್ಯಕ್ತಿ ಜನವರಿ 19 ರಂದು ನಾಗರಿಕರು ತುರ್ತು ಸಹಾಯವನ್ನು ಪಡೆಯಬಹುದಾದ 112 ಗೆ ಡಯಲ್ ಮಾಡಿದ್ದರು. ಅವನು ತನ್ನ ಹೆಸರು ಛೋಟಾ ಶಕೀಲ್ ಮತ್ತು ತಾನು ದಾವೂದ್ ಇಬ್ರಾಹಿಂನ ಆಪ್ತ ಎಂದು ಹೇಳಿಕೊಂಡಿದ್ದ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಆಲಂ ಫೋನ್‌ನಲ್ಲಿ ಹೇಳಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ. ಆರೋಪಿ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲ, ಆದರೆ ಮಾನಸಿಕವಾಗಿ ಅಸ್ಥಿರರಾಗಿದ್ದಾನೆ" ಎಂದು ಎಸ್‌ಪಿ ಸಿಂಗ್ ಹೇಳಿದರು.

ಸಮಸ್ಯೆಯ ಸೂಕ್ಷ್ಮತೆಯ ದೃಷ್ಟಿಯಿಂದ ಪಲಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನ ಮೊಬೈಲ್ ಫೋನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ  ಎಂದು ಸಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com