

ನವದೆಹಲಿ: ಪ್ರಸ್ತುತ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಮತ್ತು ಉತ್ತಮ ಅಭ್ಯಾಸಗಳಿಗೆ ಅನುಗುಣವಾಗಿ ಸರ್ಕಾರ ಕಾನೂನುಗಳನ್ನು ಆಧುನೀಕರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ 75ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳನ್ನು ಜಾರಿಗೊಳಿಸುವುದರೊಂದಿಗೆ, ಭಾರತದ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳು ಹೊಸ ಯುಗವನ್ನು ಪ್ರವೇಶಿಸಿದೆ ಎಂದರು.
ನೂರಾರು ವರ್ಷಗಳ ಹಿಂದಿನ ಕಾನೂನುಗಳಿಂದ ಇಂದು ಹೊಸ ಕಾನೂನುಗಳ ಪರಿವರ್ತನೆಯು ಸುಗಮವಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಸರ್ಕಾರಿ ನೌಕರರಿಗೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಕೆಲಸವನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ಇತರ ಪಾಲುದಾರರ ಸಾಮರ್ಥ್ಯ ವರ್ಧನೆಗಾಗಿ ಕೆಲಸ ಮಾಡಲು ಮುಂದೆ ಬರುವಂತೆ ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರನ್ನು ಒತ್ತಾಯಿಸಿದರು.
ಸಶಕ್ತ ನ್ಯಾಯಾಂಗ ವ್ಯವಸ್ಥೆಯು ವಿಕಸಿತ ಭಾರತದ ಒಂದು ಭಾಗವಾಗಿದೆ. ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಾ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನ ವಿಶ್ವಾಸ್ ಮಸೂದೆ ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅನಗತ್ಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದರು.
ಸರ್ವೋಚ್ಚ ನ್ಯಾಯಾಲಯವು ಭಾರತದ ರೋಮಾಂಚಕ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ವೈಯಕ್ತಿಕ ಹಕ್ಕುಗಳು, ವಾಕ್ ಸ್ವಾತಂತ್ರ್ಯದ ಕುರಿತು ಅನೇಕ ಮಹತ್ವದ ತೀರ್ಪುಗಳನ್ನು ನೀಡಿದೆ, ಇದು ದೇಶದ ಸಾಮಾಜಿಕ-ರಾಜಕೀಯ ಪರಿಸರಕ್ಕೆ ಹೊಸ ದಿಕ್ಕನ್ನು ನೀಡಿದೆ ಎಂದರು.
ಭಾರತದ ಇಂದಿನ ಆರ್ಥಿಕ ನೀತಿಗಳು ನಾಳಿನ ಉಜ್ವಲ ಭಾರತದ ಅಡಿಪಾಯವನ್ನು ರೂಪಿಸುತ್ತವೆ. ಇಂದು ಭಾರತದಲ್ಲಿ ಮಾಡಲಾಗುತ್ತಿರುವ ಕಾನೂನುಗಳು ನಾಳಿನ ಉಜ್ವಲ ಭಾರತವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಇಂದು ಮಾಡಿದ ಕಾನೂನುಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳೊಂದಿಗೆ, ಪ್ರಪಂಚದ ಕಣ್ಣುಗಳು ಭಾರತದತ್ತ ನೆಟ್ಟಿದೆ, ಪ್ರಪಂಚದ ನಂಬಿಕೆಯು ಭಾರತದಲ್ಲಿ ಬಲವಾಗಿ ಬೆಳೆಯುತ್ತಿದೆ. ಅಂತಹ ಸಮಯದಲ್ಲಿ, ಭಾರತವು ನೀಡಿದ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವುದು ಮುಖ್ಯವಾಗಿದೆ ಎಂದು ಮೋದಿ ಹೇಳಿದರು.
ಕಳೆದ ವಾರ ಸುಪ್ರೀಂ ಕೋರ್ಟ್ ಕಟ್ಟಡ ವಿಸ್ತರಣೆಗೆ 800 ಕೋಟಿ ರೂಪಾಯಿ ಅನುದಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದರು.