
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂದು ನಡೆದ NITI Aayogದ ಒಂಬತ್ತನೇ ಆಡಳಿತ ಮಂಡಳಿ ಸಭೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ 10 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳು ಭಾಗವಹಿಸಿರಲಿಲ್ಲ ಎಂದು ಅದರ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಸೇರಿದಂತೆ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಬಿಹಾರ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಗೈರುಹಾಜರಾಗಿದ್ದರು ಎಂದು ಹೇಳಿದರು.
ಅಂತೆಯೇ ನೀತಿ ಆಯೋಗದ ಸಭೆಯಲ್ಲಿ "ಅವರು ಭಾಗವಹಿಸದಿದ್ದರೆ ಅದು ಅವರಿಗೇ ನಷ್ಟ" ಎಂದೂ ಬಿವಿಆರ್ ಸುಬ್ರಹ್ಮಣ್ಯಂ ಅವರು ಹೇಳಿದರು.
ಇನ್ನು ಇದೇ ವೇಳೆ ಇಂದಿನ ನೀತಿ ಆಯೋಗದ ಸಭೆಗೆ ಹಾಜರಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಿಂದ ಹೊರನಡೆದ ಬಗ್ಗೆ ಮಾತನಾಡಿದ ಸುಬ್ರಹ್ಮಣ್ಯಂ ಅವರು, ಮಧ್ಯಾಹ್ನದ ವೇಳೆಗೆ ರಾಜ್ಯಗಳ ಹೆಸರುಗಳ ವರ್ಣಮಾಲೆಯ ಕ್ರಮದಲ್ಲಿ ತಮ್ಮ ಸರದಿ ಬರಬೇಕಿತ್ತು. ಆದರೂ ಊಟದ ಮೊದಲು ಮಾತನಾಡಲು ಅವರ ಮನವಿಯನ್ನು ಅಂಗೀಕರಿಸಲಾಯಿತು.
ಅವರ ಸಮಯ ಮುಗಿದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೈಕ್ ಟ್ಯಾಪ್ ಮಾಡುಲ ಮೂಲಕ ಎಚ್ಚರಿಸಿದರು. ಆದರೆ ಅಷ್ಟಕ್ಕೇ ಅವರು ಮಾತನಾಡುವುದನ್ನು ನಿಲ್ಲಿಸಿ ಹೊರನಡೆದರು. ಮಮತಾ ಹೊರ ನಡೆದರೂ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿದರು ಎಂದು ಹೇಳಿದರು.
ಬಿಹಾರದ ಬಗ್ಗೆ ಮಾತಾನಾಡಿದ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ನಿರತರಾಗಿರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement