'ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು.. ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ': CAA ಜಾರಿ ಸ್ವಾಗತಿಸಿದ ದೆಹಲಿ ಹಜ್ ಸಮಿತಿ ಅಧ್ಯಕ್ಷೆ
ನವದೆಹಲಿ: ನಾಗರೀಕ ಪೌರತ್ವ ಕಾಯ್ದೆ ಸಿಎಎ ಜಾರಿಯನ್ನು ದೆಹಲಿ ಹಜ್ ಸಮಿತಿ ಅಧ್ಯಕ್ಷೆ ಕೌಸರ್ ಜಹಾನ್ ಸ್ವಾಗತಿಸಿದ್ದು, 'ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು.. ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಹೌದು.. ಸಿಎಎ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಅತ್ತ ದೆಹಲಿ ಹಜ್ ಸಮಿತಿಯ ಅಧ್ಯಕ್ಷೆ ಕೌಸರ್ ಜಹಾನ್ ಈ ಕ್ರಮವನ್ನು ಸ್ವಾಗತಿಸಿದ್ದು, ಕೇಂದ್ರ ಗೃಹ ಸಚಿನ ಅಮಿತ್ ಶಾ ಸಿಎಎ ಜಾರಿ ಕುರಿತು ಘೋಷಣೆ ಮಾಡುತ್ತಲೇ ದೇಶದ ಮುಸ್ಲಿಮರಲ್ಲಿ ಆತಂಕ ಶುರುವಾಗಿದೆ. ಆದರೆ ಆತಂಕಕ್ಕೆ ಯಾವುದೇ ಕಾರಣಗಳಿಲ್ಲ.. ದೇಶದ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ.. ಸಿಎಎ ಪೌರತ್ವ ನೀಡಲು ಕಾಯ್ದೆ ಜಾರಿಯಾಗಿದೆಯೇ ಹೊರತು.. ಮುಸ್ಲಿಮರ ಪೌರತ್ವ ಕಸಿಯಲು ಅಲ್ಲ ಎಂದು ಹೇಳಿದರು.
ಈ ಕಾನೂನು ಪೌರತ್ವವನ್ನು ನೀಡಲು, ಅದನ್ನು ಕಸಿದುಕೊಳ್ಳಲು ಅಲ್ಲ. ನಾನು ಈ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಇದು ಪೌರತ್ವ ನೀಡಲು ಮಾಡಿರುವ ಕಾನೂನಾಗಿದ್ದು, ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಸ್ಥಿತಿ ಚೆನ್ನಾಗಿಲ್ಲ, ಅವರಿಗೆ ಗೌರವಯುತ ಜೀವನ ನೀಡಲು ಸರ್ಕಾರ ಬಯಸಿದರೆ, ಆಗ ಏನು ಮಾಡಬೇಕು? ಇದಕ್ಕಾಗಿ ಪರಿಹಾರ ಮಾಡಬೇಕಾಗಿದೆ. ಆ ಪರಿಹಾರವೇ ಸಿಎಎ ಜಾರಿ.. ಇದರಿಂದ ಏನಾದರೂ ಸಮಸ್ಯೆ ಇದೆಯೇ? ಇದರಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಗಾಬರಿ ಪಡುವ ಅಗತ್ಯವಿಲ್ಲ,'' ಎಂದರು.
ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ
ಏತನ್ಮಧ್ಯೆ, ಸಿಎಎ ಅನುಷ್ಠಾನದ ವಿರುದ್ಧ ದೇಶಾದ್ಯಂತ ಬೃಹತ್ ಆಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಯುಡಿಎಫ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಹೇಳಿದ್ದಾರೆ. ಜನರಲ್ಲಿ ಒಡಕು, ಭಯ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯುವ ಸಂಘಪರಿವಾರದ ಶಕ್ತಿಗಳ ಯತ್ನವನ್ನು ಕಾಂಗ್ರೆಸ್ ಮತ್ತು ಯುಡಿಎಫ್ ವಿರೋಧಿಸುತ್ತದೆ. ಯಾವುದೇ ಸಂದರ್ಭದಲ್ಲೂ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದರು.
ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಕೆಲವು ದಿನಗಳ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ನಿಯಮಗಳ ಅಧಿಸೂಚನೆಯನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿದೆ. ನರೇಂದ್ರ ಮೋದಿ ಸರ್ಕಾರವು ಪರಿಚಯಿಸಿದ ಮತ್ತು 2019 ರಲ್ಲಿ ಸಂಸತ್ತು ಅಂಗೀಕರಿಸಿದ CAA ನಿಯಮಗಳು, ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪಾಕಿಸ್ತಾನ, ಮತ್ತು ಅಫ್ಘಾನಿಸ್ತಾನ ಮತ್ತು 31 ಡಿಸೆಂಬರ್ 2014 ಕ್ಕಿಂತ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುತ್ತದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ