ನಿಜ್ಜರ್‌ ಹತ್ಯೆ ಪ್ರಕರಣ: ಮೂವರು ಭಾರತೀಯರ ಬಂಧನ ಕುರಿತು ಕೆನಡಾ ಮಾಹಿತಿಗಾಗಿ ಕಾಯುತ್ತಿದ್ದೇವೆ; ಜೈಶಂಕರ್

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಮೂವರು ಭಾರತೀಯರ ಬಂಧನದ ಕುರಿತು ಕೆನಡಾ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.
ವಿದೇಶಾಂಕ ಸಚಿವ ಎಸ್ ಜೈಶಂಕರ್
ವಿದೇಶಾಂಕ ಸಚಿವ ಎಸ್ ಜೈಶಂಕರ್PTI

ಭುವನೇಶ್ವರ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಮೂವರು ಭಾರತೀಯರ ಬಂಧನದ ಕುರಿತು ಕೆನಡಾ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.

ಭುವನೇಶ್ವರಕ್ಕೆ ಎರಡು ದಿನಗಳ ಭೇಟಿ ನೀಡಿರುವ ಜೈಶಂಕರ್ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಂಕಿತರು ಹಲವು ರೀತಿಯ ಗ್ಯಾಂಗ್ ಚಟುವಟಿಕೆಗಳೊಂದಿಗೆ ಸಂಬಂಧವನ್ನು ಹೊಂದಿರುವ ಸಾಧ್ಯತೆಯಿದ್ದು, ಕೆನಡಾದ ಕಾನೂನು ಜಾರಿ ಅಧಿಕಾರಿಗಳಿಂದ ಸ್ಪಷ್ಟತೆ ಸಿಗಬೇಕಿದೆ. ಕೆನಡಾದಿಂದ ಪಂಜಾಬ್‌ ಮತ್ತಿತರ ಕಡೆ ಸಂಘಟಿತ ಅಪರಾಧಗಳನ್ನು ನಡೆಸುತ್ತಿರಯವ ಉಗ್ರರ ಬಗ್ಗೆ ಭಾರತದ ದೀರ್ಘಕಾಲದ ಕಳವಳವನ್ನು ಅವರು ಪುನರುಚ್ಚರಿಸಿದರು.

ಭಾರತೀಯರ ಬಂಧನ ಕುರಿತು ಮಾತನಾಡಿ, ಶಂಕಿತರು ಕೆಲವು ರೀತಿಯ ಗ್ಯಾಂಗ್ ಹಿನ್ನೆಲೆಯ ಭಾರತೀಯರು ಎಂದು ಹೇಳಲಾಗಿದೆ. ಕೆನಡಾ ಸರ್ಕಾರ ನಮಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ವಾಸ್ತವವಾಗಿ, ಅವರ ಬಳಿ ಏನಾದರೂ ಇದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ನಾವು ಅವರಿಗೆ ಪದೇ ಪದೇ ಹೇಳಿದ್ದೇವೆ. ಭಾರತೀಯರ ಬಂಧನ ಕುರಿತು ಕೆನಡಾ ಪೊಲೀಸರು ನಮಗೆ ತಿಳಿಸುವ ತನಕ ನಾವು ಕಾಯಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದೇಶಾಂಕ ಸಚಿವ ಎಸ್ ಜೈಶಂಕರ್
ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರ ಬಂಧನ; ತನಿಖೆ ಇಲ್ಲಿಗೆ ಮುಗಿದಿಲ್ಲ ಎಂದ ಕೆನಡಾ!

ಖಾಲಿಸ್ತಾನಿ ಪರವಿರುವವರ ಒಂದು ಗುಂಪು, ಕೆನಡಾದ ಪ್ರಜಾಪ್ರಭುತ್ವವನ್ನು ಬಳಸಿಕೊಂಡು ಲಾಬಿ ನಡೆಸುತ್ತಿದೆ. ಇವರೇ ಅಲ್ಲಿನ ಮತ ಬ್ಯಾಂಕ್‌ ಆಗಿದ್ದಾರೆ. ಆಡಳಿತಾರೂಡ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ. ಕೆಲವು ಪಕ್ಷಗಳು ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರನ್ನೇ ಅವಲಂಬಿಸಿವೆ. ಇಂತಹ ಅಂಶಗಳಿಗೆ ರಾಜಕೀಯ ಮಾನ್ಯತೆ ನೀಡಿದರೆ ನಿಮಗೂ ನಮಗೂ ಸಮಸ್ಯೆಯಾಗುತ್ತದೆ ಎಂದು ನಾವು ಅವರಿಗೆ ಹೇಳುತ್ತಲೇ ಬಂದಿದ್ದೇವೆ. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸರ್ಕಾರವನ್ನು ಉಳಿಸಲು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ.

ಕೆನಡಾದಲ್ಲಿರುವ ಖಲಿಸ್ತಾನಿಗಳ ಬಗ್ಗೆ ಭಾರತವು ಹೆಚ್ಚಿನ ವಿವರಗಳನ್ನು ತೆಗೆದುಕೊಂಡಿದೆ. ಕೆನಡಾದ ಸರ್ಕಾರಕ್ಕೂ ಖಲಿಸ್ತಾನಿಗಳ ಬಗ್ಗೆ ಮಾಹಿತಿಯಿದೆ. ಸಾಕಷ್ಟು ಮನವಿಗಳ ಹೊರತಾಗಿಯೂ ಅವರು ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ.

ಮತ್ತೊಂದೆಡೆ, ಕೆನಡಾದಲ್ಲಿನ ಭಾರತದ ಹೈ ಕಮಿಷನರ್ ಸಂಜಯ್ ವರ್ಮಾ ಅವರು ಪರಿಸ್ಥಿತಿಯ ಬಗ್ಗೆ ಅವಲೋಕಿಸುತ್ತಿದ್ದಾರೆಂದು ಹೇಳಿದರು.

ಕೆನಡಾದ ಅಧಿಕಾರಿಗಳಿಂದ ಮಾಹಿತಿ ಸಿಗುವ ಭರವಸೆಯಿದೆ. ಈ ಸಮಸ್ಯೆಯು ಕೆನಡಾದ ಆಂತರಿಕ ವಿಚಾರವಾಗಿದ್ದು, ಭಾರತವು ಇದರಲ್ಲಿ ಮಧ್ಯ ಪ್ರವೇಶಿಸದೆ ದೂರ ಉಳಿಯಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com