ಕುಸಿದ ಬೇಡಿಕೆ: ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಆಸ್ಟ್ರಾಜೆನಿಕಾ ಘೋಷಣೆ!

ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗುತ್ತಿರುವ ಕುರಿತು ವರದಿಯಾದ ಬೆನ್ನಲ್ಲೇ ಕೋವಿಡ್ ಲಸಿಕೆಗೆ ಬೇಡಿಕೆ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಅಸ್ಟ್ರಾಜೆನೆಕಾ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗುತ್ತಿರುವ ಕುರಿತು ವರದಿಯಾದ ಬೆನ್ನಲ್ಲೇ ಕೋವಿಡ್ ಲಸಿಕೆಗೆ ಬೇಡಿಕೆ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಅಸ್ಟ್ರಾಜೆನೆಕಾ ಘೋಷಣೆ ಮಾಡಿದೆ.

ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಕೋವಿಡ್​ ರೂಪಾಂತರಗಳಿಗೆ ಲಸಿಕೆಗಳಿದ್ದು, ನಮ್ಮ ಸಂಸ್ಥೆಯ ಲಸಿಕೆಯ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸಂಸ್ಥೆಯು ಯಾವುದೇ ಕೋವಿಡ್​ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರಾಜೆನೆಕಾ ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಾಗಿ ಲಭ್ಯವಿದೆ. ಇದು ಲಸಿಕೆಗೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್​​ 5ರಂದು ಸಂಸ್ಥೆಯು ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದು, ಮೇ 7ರಿಂದ ಜಾರಿಗೆ ಬಂದಿದೆ. ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಯುರೋಪಿಯನ್​ ಯೂನಿಯನ್​ ಈ ಲಸಿಕೆಯನ್ನು ಬಳಸುವುದಿಲ್ಲ ಎಂದು ಹೇಳಿದೆ.

ಸಂಗ್ರಹ ಚಿತ್ರ
ಕೋವಿಡ್-19: Covishield ಲಸಿಕೆ ಅಡ್ಡಪರಿಣಾಮ ಬೀರಬಹುದು.. ಆದರೆ..: AstraZeneca

ನಮ್ಮ ಲಸಿಕೆ ಟಿಟಿಎಸ್ ಎಂಬ​​ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನಾವು ಮಾರುಕಟ್ಟೆಯಿಂದ ಹಿಂಪಡೆಯುತ್ತಿಲ್ಲ. ಲಸಿಕೆ ಹಿಂಪಡೆಯುವಿಕೆ ಮತ್ತು ಅಡ್ಡ ಪರಿಣಾಮದ ಕಾರಣಗಳು ಕೇವಲ ಕಾಕತಾಳೀಯವಷ್ಟೇ ಎಂದು ಆಸ್ಟ್ರಾಜೆನೆಕಾ ತಿಳಿಸಿರುವುದಾಗಿ ದಿ ಟೆಲಿಗ್ರಾಫ್​ ವರದಿಯಲ್ಲಿ ಉಲ್ಲೇಖವಿದೆ.

ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್)​ ಯುಕೆಯಲ್ಲಿ 81 ಸಾವು ಮತ್ತು ನೂರಾರು ಗಂಭೀರ ಗಾಯ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದು, ಲಸಿಕೆ ತಯಾರಿಸಿದ್ದ ಆಸ್ಟ್ರಾಜೆನೆಕಾ ವಿರುದ್ದ 50ಕ್ಕೂ ಹೆಚ್ಚು ಮಂದಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಕೋವಿಡ್​​ ವಿರುದ್ಧದ ಹೋರಾಟದಲ್ಲಿ ಆಕ್ಸ್‌ಫರ್ಡ್​ ಜೊತೆಗೂಡಿ ಆಸ್ಟ್ರಾಜೆನೆಕಾ ತಯಾರಿಸಿದ್ದ ಎಜೆಡ್​ಡಿ1222 ಎಂಬ ಲಸಿಕೆ ಟಿಟಿಎಸ್‌ ಎಂದರೆ ರಕ್ತ ಹೆಪ್ಪುಗಟ್ಟುವಿಕೆ ಹಾಗು ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆ ಮಾಡುವಂತಹ ಅಪರೂಪದ ಅಡ್ಡ ಪರಿಣಾಮ ಹೊಂದಿದೆ ಎಂದು 2021ರಲ್ಲಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ ಕಂಪನಿ, ತಮ್ಮ ಲಸಿಕೆ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್​ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ದಾಖಲಾತಿಯೊಂದಿಗೆ ಒಪ್ಪಿಕೊಂಡಿತ್ತು.

ಎಜೆಡ್​​ 1222 ಲಸಿಕೆಯನ್ನು ಭಾರತದ ಸೀರಂ ಸಂಸ್ಥೆಯಿಂದ ಕೋವಿಶೀಲ್ಡ್​​ ಹೆಸರಿನಲ್ಲಿ ಉತ್ಪಾದಿಸಿ ಪೂರೈಸಲಾಗಿತ್ತು. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೂ ಈ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಯುಕೆಯಲ್ಲಿ ಈ ಲಸಿಕೆಯನ್ನು ವ್ಯಾಕ್ಸ್‌ಜೆವ್ರಿಯಾ ಎಂಬ ಹೆಸರಿನಲ್ಲಿ ವಿತರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com