
ಮುಂಬೈ: ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ 16 ಜನರ ಸಾವಿಗೆ ಕಾರಣವಾದ ದೈತ್ಯ ಹೋರ್ಡಿಂಗ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಶುಕ್ರವಾರ ಮುಂಜಾನೆ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಸಂಜೆ ಉಪನಗರ ಘಾಟ್ಕೋಪರ್‌ನಲ್ಲಿ ಕುಸಿದ ಜಾಹೀರಾತು ಫಲಕವನ್ನು ಇತ್ತೀಚೆಗೆ ಅಳವಡಿಸಿದ್ದ M/s Ego Media Pvt.Ltd ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರನ್ನು ಗುರುವಾರ ರಾಜಸ್ಥಾನದ ಉದಯಪುರದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ನಂತರ ಭಿಂಡೆ ಅವರನ್ನು ಅಹಮದಾಬಾದ್‌ಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಭಿಂಡೆ ಅವರೊಂದಿಗೆ ಪೊಲೀಸ್ ತಂಡವು ಮುಂಜಾನೆ 5 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು ಮತ್ತು ಅವರನ್ನು ಅಪರಾಧ ವಿಭಾಗದ ಕಚೇರಿಗೆ ಕರೆದೊಯ್ಯಲಾಗಿದ್ದು, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ಮೂರು ದಿನಗಳ ಕಾಲ ಭಿಂಡೆಯನ್ನು ಹಿಂಬಾಲಿಸಿದ ನಂತರ, ನಗರ ಪೊಲೀಸರು ಗುರುವಾರ ಉದಯಪುರದಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.
ಜೋರಾದ ಗಾಳಿ ಮತ್ತು ಭಾರಿ ಮಳೆಯಿಂದಾಗಿ ಘಾಟ್ಕೋಪರ್‌ನ ಛೇದನಗರ ಪ್ರದೇಶದಲ್ಲಿ 120 ಅಡಿ x 120 ಅಡಿಯ ಬೃಹತ್ ಗಾತ್ರದ ಹೋರ್ಡಿಂಗ್ ಪೆಟ್ರೋಲ್ ಬಂಕ್ ಮೇಲೆ ಬಿದ್ದಿತ್ತು. ಘಟನೆಯಲ್ಲಿ 16 ಜನರು ಸಾವಿಗೀಡಾಗಿದ್ದರು ಮತ್ತು 75 ಜನರು ಗಾಯಗೊಂಡಿದ್ದರು.
Advertisement