
ನವದೆಹಲಿ: ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಚಾರಿತ್ರ್ಯ ವಧೆ ಅಭಿಯಾನದ ನಂತರ ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಯೂಟ್ಯೂಬರ್ ಧ್ರುವ್ ರಾಠೆ ಅವರು ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಭಾನುವಾರ ಹೇಳಿದ್ದಾರೆ.
'ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಅಂದರೆ, ಎಎಪಿ ನನ್ನ ವಿರುದ್ಧ ಚಾರಿತ್ರ್ಯ ವಧೆ, ಸಂತ್ರಸ್ತೆಯನ್ನು ಅವಮಾನಿಸುವ ಮತ್ತು ಭಾವನೆಗಳನ್ನು ಕೆರಳಿಸುವ ಅಭಿಯಾನವನ್ನು ಆರಂಭಿಸಿದ ನಂತರ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಯೂಟ್ಯೂಬರ್ ಧ್ರುವ್ ರಾಠೆ ಅವರು ನನ್ನ ವಿರುದ್ಧ ಏಕಪಕ್ಷೀಯ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು' ಮಲಿವಾಲ್ ಭಾನುವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪಕ್ಷದ ನಾಯಕತ್ವ ತಾನು ದೂರನ್ನು ಹಿಂಪಡೆಯುವಂತೆ ಹೆದರಿಸಲು ಪ್ರಯತ್ನಿಸುತ್ತಿದೆ. ಧ್ರುವ್ ರಾಠೆ ಅವರನ್ನು ಸಂಪರ್ಕಿಸಲು ಮತ್ತು ನನ್ನ ಕಡೆಯ ಕಥೆಯನ್ನು ಹೇಳಲು ಪ್ರಯತ್ನಿಸಿದರೂ, ಅವರು ತನ್ನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ದೂರಿದರು.
'ಸ್ವತಂತ್ರ ಪತ್ರಕರ್ತರು ಎಂದು ಹೇಳಿಕೊಳ್ಳುವ ಅವರಂತಹ ಜನರು ಇತರ ಎಎಪಿ ವಕ್ತಾರರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಈಗ ತೀವ್ರ ನಿಂದನೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದು, ಸಂತ್ರಸ್ತೆಗೆ ಅವಮಾನ ಮಾಡುವಂತಾಗಿದೆ' ಎಂದು ಅವರು ಹೇಳಿದರು.
ಧ್ರುವ್ ರಾಠೆ ಅವರ 2.5 ನಿಮಿಷಗಳ ವಿಡಿಯೋದಲ್ಲಿ, ಘಟನೆ ಸಂಭವಿಸಿದೆ ಎಂದು ಒಪ್ಪಿಕೊಂಡ ನಂತರ ಎಎಪಿ ಏಕೆ ಯು-ಟರ್ನ್ ತೆಗೆದುಕೊಂಡಿತು; ಹಲ್ಲೆಯಿಂದ ಗಾಯಗಳಾಗಿವೆ ಎಂಬುದನ್ನು ವೈದ್ಯಕೀಯ ವರದಿ ಬಹಿರಂಗಪಡಿಸಿದೆ; ವಿಡಿಯೋದ ಆಯ್ದ ಭಾಗವನ್ನು ಬಿಡುಗಡೆ ಮಾಡಲಾಯಿತು ಮತ್ತು ನಂತರ ಆರೋಪಿಯ ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ; ಆರೋಪಿಯನ್ನು ಅಪರಾಧ ಸ್ಥಳದಿಂದ (ಸಿಎಂ ಮನೆ) ಬಂಧಿಸಲಾಗಿದೆ. ಅವರಿಗೆ ಮತ್ತೆ ಆ ಸ್ಥಳಕ್ಕೆ ಪ್ರವೇಶಿಸಲು ಅನುಮತಿ ನೀಡಿದ್ದು ಏಕೆ? ಸಾಕ್ಷ್ಯಗಳನ್ನು ತಿದ್ದುವುದಕ್ಕಾಗಿಯೇ?; ಮತ್ತು ಮಣಿಪುರಕ್ಕೆ ಭದ್ರತೆಯಿಲ್ಲದೆ ಏಕಾಂಗಿಯಾಗಿ ಭೇಟಿ ನೀಡುವಂತಹ ಧೈರ್ಯ ಮತ್ತು ಸ್ವತಂತ್ರ ಕಾರ್ಯಗಳಿಗೆ ಹೆಸರುವಾಸಿಯಾದ ಮಹಿಳೆ ಹೇಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ? ಎಂಬ ಅಂಶಗಳನ್ನು ನಿರ್ಲಕ್ಷ್ಯಿಸಲಾಗಿದೆ ಎಂದಿದ್ದಾರೆ.
'ಇಡೀ ಪಕ್ಷದ ಆಡಳಿತ ವರ್ಗ ಮತ್ತು ಅದರ ಬೆಂಬಲಿಗರು ನನ್ನನ್ನು ನಿಂದಿಸಲು ಮತ್ತು ಅವಮಾನಿಸಲು ಪ್ರಯತ್ನಿಸುತ್ತಿರುವ ರೀತಿಯನ್ನು ನೋಡಿದರೆ ಮಹಿಳಾ ಸಮಸ್ಯೆಗಳ ಬಗ್ಗೆ ಅವರ ನಿಲುವು ಏನೆಂಬುದನ್ನು ತೋರಿಸುತ್ತದೆ. ನನಗೆ ಬರುತ್ತಿರುವ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳ ಕುರಿತು ದೆಹಲಿ ಪೊಲೀಸರಿಗೆ ವರದಿ ಮಾಡುತ್ತಿದ್ದೇನೆ. ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಮಲಿವಾಲ್ ಹೇಳಿದ್ದಾರೆ.
ಯಾವುದೇ ಸಂದರ್ಭದಲ್ಲಿ, ನನಗೆ ಏನಾದರೂ ಸಂಭವಿಸಿದರೆ, ಅದನ್ನು ಪ್ರಚೋದಿಸಿದವರು ಯಾರು ಎಂಬುದು ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ಮೇ 13ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಅವರನ್ನು ಮೇ 18 ರಂದು ಬಂಧಿಸಲಾಯಿತು.
ಕೇಜ್ರಿವಾಲ್‌ಗೆ ಮಾಜಿ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಶನಿವಾರ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಸಂಬಂಧ ಪ್ರತಿಕ್ರಿಯೆ ಕೇಳಿದೆ.
Advertisement