ಅಮರಾವತಿ: ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಹಾಗೂ ಅವರ ಸಹೋದರ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಡುವಿನ ಆಸ್ತಿ ಹಂಚಿಕೆ ವಿಚಾರದಲ್ಲಿ ತೀವ್ರ ಪೈಪೋಟಿಯ ನಡುವೆ ಶರ್ಮಿಳಾ ಅವರ ಸುರಕ್ಷತೆಗೆ ಸಂಭಾವ್ಯ ಬೆದರಿಕೆಯಿದ್ದು, ಅವರಿಗೆ ಒದಗಿಸಿರುವ ಭದ್ರತೆ ಹೆಚ್ಚಿಸಬೇಕು ಎಂದು ಆಂಧ್ರ ಪ್ರದೇಶ ಕಾಂಗ್ರೆಸ್ ನಾಯಕರೊಬ್ಬರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ ಎನ್ ರಾಜಾ ಅವರು ಡಿಜಿಪಿ ಸಿಎಚ್ ದ್ವಾರಕಾ ತಿರುಮಲ ರಾವ್ ಅವರಿಗೆ ಪತ್ರ ಬರೆದು, ಶರ್ಮಿಳಾ ಅವರಿಗೆ ಭದ್ರತೆಯನ್ನು 'ವೈ' ಶ್ರೇಣಿಗೆ ಹೆಚ್ಚಿಸಬೇಕು ಮತ್ತು 4+4 ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
'ವೈಎಸ್ ಶರ್ಮಿಳಾ ರೆಡ್ಡಿ ಅವರು ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದು, ಆಂಧ್ರಪ್ರದೇಶದ ಪ್ರಮುಖ ಪಕ್ಷದ ಮುಂದಾಳುವು ಆಗಿದ್ದು, ವಿವಿಧ ಸಾಮಾಜಿಕ ಚಳುವಳಿ ಸಮಾವೇಶದಲ್ಲಿ ಭಾಗಿಯಾಗುತ್ತಿರುತ್ತಾರೆ. ಸದ್ಯದ ರಾಜಕೀಯ ಪರಿಸ್ಥಿತಿಯು ಅವರ ರಕ್ಷಣೆಗೆ ಬೆದರಿಕೆಯೊಡ್ಡುತ್ತಿದೆ. ಹೀಗಾಗಿ ಅವರಿಗೆ ನೀಡಲಾಗಿರುವ ಭದ್ರತೆಯನ್ನು ವೈ ಶ್ರೇಣಿಗೆ ವಿಸ್ತರಿಸಬೇಕು ಎಂದು ರಾಜಾ ಅವರು ಡಿಜಿಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಶರ್ಮಿಳಾ ಅವರಿಗೆ ತೆಲಂಗಾಣದಲ್ಲಿ ವೈ ಶ್ರೇಣಿಯ ಭದ್ರತೆ ಇದೆ. ಆಂಧ್ರ ಪ್ರದೇಶದಲ್ಲೂ ಅದನ್ನು ವಿಸ್ತರಿಸಬೇಕು. ಅಂತೆಯೇ ಅವರ ಭದ್ರತಾ ವ್ಯವಸ್ಥೆಯನ್ನು 2 + 2 ರಿಂದ 4 + 4 ಕ್ಕೆ ಹೆಚ್ಚಿಸುವಂತೆ ಡಿಜಿಪಿಗೆ ಮನವಿ ಮಾಡಿದ್ದಾರೆ. ಇದು ಹೆಚ್ಚು ದೃಢವಾದ ಭದ್ರತೆಯನ್ನು ಒದಗಿಸುತ್ತದೆ. ವಿಶೇಷವಾಗಿ ದೊಡ್ಡ ರಾಜಕೀಯ ಸಮಾರಂಭ, ಸಾರ್ವಜನಿಕ ಸಭೆಗಳಲ್ಲಿ ಸಂಭಾವ್ಯ ಬೆದರಿಕೆ ನಿಭಾಯಿಸಲು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತದೆ.
Advertisement