ಚೆನ್ನೈ: ಕಳೆದ ಐದು ತಿಂಗಳಲ್ಲಿ ಕಾವೇರಿ ನದಿಯಿಂದ ಸುಮಾರು 50 ಟಿಎಂಸಿ ನೀರು ಸಮುದ್ರ ಸೇರಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವರ್ಷ ಜೂನ್ ಮತ್ತು ಅಕ್ಟೋಬರ್ ನಡುವೆ ಕರ್ನಾಟಕದಿಂದ 244.52 ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡು ಪಡೆದಿದೆ. ಇದು ಅಗತ್ಯ ಪ್ರಮಾಣವಾದ 143.36 ಟಿಎಂಸಿ ಅಡಿಯನ್ನೂ ಮೀರಿದ್ದು, ಹೆಚ್ಚುವರಿ ಒಳಹರಿವು ರಾಜ್ಯಕ್ಕೆ 101.16 ಟಿಎಂಸಿ ಅಡಿಯಷ್ಟಿದೆ.
ಈ ಪೈಕಿ ಸುಮಾರು 50 ಟಿಎಂಸಿ ಅಡಿ ನೀರನ್ನು ಸಮುದ್ರಕ್ಕೆ ಹರಿಸಲಾಗಿದೆ ಎಂದು ತಮಿಳುನಾಡಿನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಬಹಿರಂಗಪಡಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಗ್ರಹಿಸಿದ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ (WRD) ದತ್ತಾಂಶದ ಪ್ರಕಾರ, 'ರಾಜ್ಯದ ಬಹುವಾರ್ಷಿಕ ನೀರಿನ ಮೂಲವಾದ ಮೆಟ್ಟೂರು ಜಲಾಶಯವು ಬುಧವಾರದವರೆಗೆ 74,100 mcft ನೀರನ್ನು (79.28%) ಹೊಂದಿದೆ. ಇದು 93,470 mcft ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಅಂತೆಯೇ ಜನವರಿ ಮಧ್ಯದವರೆಗೆ ಈಶಾನ್ಯ ಮಾನ್ಸೂನ್ ಸಮಯದಲ್ಲಿ ಸಾಕಷ್ಟು ಮಳೆಯಾಗುವ ನಿರೀಕ್ಷೆ ಇದ್ದು ಇದು ಮುಂಬರುವ ಬೇಸಿಗೆ ಕಾಲದಲ್ಲಿ ತಮಿಳುನಾಡಿನ ನೀರಿನ ಅವಶ್ಯಕತೆಗಳನ್ನು ಪೂರೈಸುವ ಸಾಧ್ಯತೆಯಿದೆ.
ಏತನ್ಮಧ್ಯೆ, ಡೆಲ್ಟಾ ಪ್ರದೇಶಗಳಲ್ಲಿನ ಆಯಕಟ್ ಭೂಮಿಗೆ ಅನುಕೂಲವಾಗುವಂತೆ ನೀರು ಸಂಗ್ರಹಣಾ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ರೈತರು ತಮಿಳುನಾಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದಾಗ್ಯೂ, ರಾಜ್ಯ ಸರ್ಕಾರವು ಅನುಷ್ಠಾನಕ್ಕಾಗಿ WRD (ಜಲ ಸಂಪನ್ಮೂಲ ಅಭಿವೃದ್ಧಿ ಇಲಾಖೆ) ಗೆ ಹಣವನ್ನು ಮಂಜೂರು ಮಾಡಿದರೆ ಮಾತ್ರ ಶಾಶ್ವತ ಪರಿಹಾರವನ್ನು ಒದಗಿಸಲು ಹೊಸ ಯೋಜನೆಗಳು ಕಾರ್ಯಸಾಧ್ಯವಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿರಿಯ WRD ಅಧಿಕಾರಿಯೊಬ್ಬರು ಮಾತನಾಡಿ, “ನಾವು ಬ್ಯಾರೇಜ್‌ಗಳನ್ನು ನಿರ್ಮಿಸಲು ಕಾವೇರಿ ಮತ್ತು ಕೊಲ್ಲಿಡಂ ನದಿಗಳ ಉದ್ದಕ್ಕೂ ಸುಮಾರು 10 ಸ್ಥಳಗಳನ್ನು ಗುರುತಿಸಿದ್ದೇವೆ. ಇದರಿಂದ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಸಂಗ್ರಹಿಸಬಹುದು. ಈ ಉದ್ದೇಶಕ್ಕಾಗಿ ನಾವು ವಿವರವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Advertisement