
ಚೆನ್ನೈ: ದೇಶದ ಪ್ರತಿಷ್ಠಿತ ರೈಲು ಸೇವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಊಟದಲ್ಲಿ ಹುಳು ಪತ್ತೆಯಾದ ಹಿನ್ನಲೆಯಲ್ಲಿ ರೈಲ್ವೇ ಇಲಾಖೆ ಕೇಟರಿಂಗ್ ಸಿಬ್ಬಂದಿಗೆ ಬರೊಬ್ಬರಿ 50 ಸಾವಿರ ರೂ ದಂಡ ವಿಧಿಸಿದೆ.
ಹೌದು.. ತಮಿಳುನಾಡಿನ ತಿರುನಲ್ವೇಲಿ ಜಂಕ್ಷನ್‌ನಿಂದ ಚೆನ್ನೈ ಎಗ್ಮೋರ್‌ಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ರೈಲಿನಲ್ಲಿ ಬಡಿಸಿದ ಸಾಂಬಾರ್‌ನಲ್ಲಿ ಕೀಟಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾನೆ.
ಕೂಡಲೇ ಆತ ಐಆರ್‌ಸಿಟಿಸಿಗೆ ದೂರು ಸಲ್ಲಿಸಿದ್ದು ಮಾತ್ರವಲ್ಲದೆ ಕಲುಷಿತ ಆಹಾರದ ದೃಶ್ಯಗಳನ್ನು ಫೋಟೋ ತೆಗೆದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವಿಚಾರ ಗಮನಿಸಿದ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು, "ಪ್ರೀಮಿಯಂ ರೈಲುಗಳಲ್ಲಿ" "ಆಹಾರ ಸುರಕ್ಷತೆ" ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.
'ಆತ್ಮೀಯ ಅಶ್ವಿನಿ ವೈಷ್ಣವ್ ಜೀ, ತಿರುನಲ್ವೇಲಿ-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಬಡಿಸಿದ ಆಹಾರದಲ್ಲಿ ಜೀವಂತ ಕೀಟಗಳು ಕಂಡುಬಂದಿವೆ" ಎಂದು ಟಾಗೋರ್ ಎಕ್ಸ್‌ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ಬರೆದಿದ್ದಾರೆ. ಅಲ್ಲದೆ ಇಂತಹ ಸಮಸ್ಯೆ ಪರಿಹರಿಸಲು ಮತ್ತು ಪ್ರೀಮಿಯಂ ರೈಲುಗಳಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ?” ಎಂದು ಪ್ರಶ್ನಿಸಿದ್ದರು.
ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತ ದಕ್ಷಿಣ ರೈಲ್ವೆಯ ಅಧಿಕೃತ ಎಕ್ಸ್ ಹ್ಯಾಂಡಲ್, ಕಲುಷಿತ ಆಹಾರದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ರೈಲ್ವೆಯು ಆಹಾರದ ಮಾದರಿಗಳನ್ನು ಸಂಗ್ರಹಿಸಿ, ಮಾಲಿನ್ಯದ ಮೂಲವನ್ನು ಗುರುತಿಸಲು ಪರೀಕ್ಷೆಗೆ ಕಳುಹಿಸಿದ್ದಲ್ಲದೆ, ಅಡುಗೆ ಮಾಡುವವರಿಗೆ 50,000 ರೂಪಾಯಿ ದಂಡವನ್ನು ವಿಧಿಸಿದೆ ಎಂದು ಹೇಳಿದೆ.
ಮಾತ್ರವಲ್ಲದೇ "ಈ ನಿರ್ಲಕ್ಷ್ಯಕ್ಕಾಗಿ, ಗುತ್ತಿಗೆದಾರ ಎಂಎಸ್ ಬೃಂದಾವನ ಆಹಾರ ಉತ್ಪನ್ನಗಳ ಮೇಲೆ 50,000 ರೂಪಾಯಿ ದಂಡವನ್ನು ವಿಧಿಸಲಾಗಿದೆ ಮತ್ತು ಮುಂದಿನ ಕ್ರಮವನ್ನು ಅನುಸರಿಸಲಾಗುತ್ತಿದೆ" ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಅಂತೆಯೇ "ರೈಲ್ವೆಯು ಈ ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ನಡೆಸುತ್ತಿದೆ, ಸಮಸ್ಯೆ ಮೂಲದ ಬಗ್ಗೆ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸುತ್ತದೆ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
"ರೈಲ್ವೆಯು ಆಹಾರದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರೈಲುಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವುದರೊಂದಿಗೆ ಪ್ರಯಾಣಿಕರಿಗೆ ಒದಗಿಸಲಾದ ಆಹಾರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಪ್ರಯಾಣಿಕರ ದೂರುಗಳನ್ನು ರೈಲ್ ಮಡಾಡ್ ವ್ಯವಸ್ಥೆಯ ಮೂಲಕ ತ್ವರಿತವಾಗಿ ನಿರ್ವಹಿಸಲಾಗುತ್ತದೆ, ಸಮಯೋಚಿತ ಪರಿಹಾರ ಮತ್ತು ಅನುಸರಣೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿಕೆಯಲ್ಲಿ ಒತ್ತಿ ಹೇಳಲಾಗಿದೆ.
Advertisement