ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದಲ್ಲಿ ಶೇ.69.69ರಷ್ಟು ಮತದಾನ ದಾಖಲಾಗಿದ್ದು, ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಮೂರು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ ಮತದಾನ ಕೇಂದ್ರಗಳಲ್ಲಿ ಶೇ.63.88ರಷ್ಟು ಮತದಾನವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಶೇ.58.58ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ಅಕ್ಟೋಬರ್ 1 ರಂದು ನಡೆದ 3ನೇ ಹಂತದಲ್ಲಿ, ಕೇಂದ್ರಾಡಳಿತ ಪ್ರದೇಶದ 40 ಸ್ಥಾನಗಳಿಗೆ ಮತದಾನ ನಡೆದಿದ್ದು, ಪುರುಷ ಮತದಾರರು ಶೇಕಡಾ 69.37 ರಷ್ಟು ಮತ್ತು ಶೇಕಡಾ 70.02 ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟಾರೆ ಶೇ. 63.88 ರಷ್ಟು ಮತದಾನವಾಗಿದ್ದು, ಪುರುಷರ ಭಾಗವಹಿಸುವಿಕೆ ಶೇ. 64.68 ರಷ್ಟು ದಾಖಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಒಟ್ಟಾರೆ ಮಹಿಳಾ ಮತದಾನ ಪ್ರಮಾಣ ಶೇ.63.04 ಹಾಗೂ ತೃತೀಯಲಿಂಗಿಗಳ ಮತದಾನ ಪ್ರಮಾಣ ಶೇ.38.24 ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
2019 ರ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆದಿದ್ದು, ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ವಿಶೇಷ ಮತಗಟ್ಟೆಗಳು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ನಡೆದ ಮೊದಲ ಹಂತದಲ್ಲಿ ಶೇ.61.38ರಷ್ಟು ಮತದಾನ ನಡೆದಿದ್ದರೆ, ಸೆಪ್ಟೆಂಬರ್ 26ರಂದು ನಡೆದ ಎರಡನೇ ಹಂತದಲ್ಲಿ ಶೇ.57.31ರಷ್ಟು ಮತದಾನವಾಗಿತ್ತು. ಮೂರನೇ ಹಂತದಲ್ಲಿ ಶೇ.69.69 ರಷ್ಟು ಮತದಾನವಾಗಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement