ಮೈಹಾರ್: ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಭಾನುವಾರ ಮೃತಪಟ್ಟಿದ್ದು ಮೃತರ ಸಂಖ್ಯೆ9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮೈಹಾರ್‌ನಲ್ಲಿ ನಿಂತಿದ್ದ ಕಲ್ಲು ತುಂಬಿದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ನಂತರ ಸುಮಾರು 20 ಜನರು ಗಾಯಗೊಂಡಿದ್ದರು.
ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ. ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಅಪಘಾತ ನಡೆದಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪ್ರಯಾಗ್‌ರಾಜ್‌ನಿಂದ ರೇವಾ ಮೂಲಕ ನಾಗ್ಪುರಕ್ಕೆ ತೆರಳುತ್ತಿದ್ದ ಬಸ್ ನಾದನ್ ದೇಹತ್ ಪೊಲೀಸ್ ಠಾಣೆ ಬಳಿ ಅಪಘಾತಕ್ಕೀಡಾಗಿರುವುದಾಗಿ ಮೈಹಾರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಅಗರವಾಲ್ ತಿಳಿಸಿದ್ದಾರೆ.
ಈ ಹಿಂದೆ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. ಆದರೆ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೂ ಮೂವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ನಾಲ್ಕು ವರ್ಷದ ಬಾಲಕ ಸೇರಿದಂತೆ ಎಲ್ಲರೂ ಪುರುಷರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement