
ಪಾಟ್ನಾ: ಮತ್ತೊಂದು 'ಮರ್ಯಾದಾ ಹತ್ಯೆ' ವರದಿಯಾಗಿದ್ದು, ಪ್ರೀತಿಸಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಗಳನ್ನು ಪುಸಲಾಯಿಸಿ ಮನೆಗೆ ಕರೆಸಿದ್ದ ತಂದೆಯೇ ಆಕೆಯನ್ನು ಕೊಂದು ಹಾಕಿರುವ ದಾರುಣ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಬಿಹಾರದ ಸಮಷ್ಟಿಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ತಂದೆಯಿಂದಲೇ ಕೊಲೆಗೀಡಾದ ಯುವತಿಯನ್ನು 25 ವರ್ಷದ ಸಾಕ್ಷಿ ಎಂದು ಗುರುತಿಸಲಾಗಿದೆ. ಸಾಕ್ಷಿ ತನ್ನದೇ ನೆರೆ ಮನೆಯ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಆತನೊಂದಿಗೆ ಇತ್ತೀಚೆಗೆ ಮನೆ ಬಿಟ್ಟು ದೆಹಲಿಗೆ ಪರಾರಿಯಾಗಿದ್ದಳು.
ಆದರೆ ಬಳಿಕ ಕುಟುಂಬಸ್ಥರು ಆಕೆಯನ್ನು ಪುಸಲಾಯಿಸಿ ಮನೆಗೆ ಬರುವಂತೆ ಮಾಡಿದ್ದರು. ಆದರೆ ಮನೆಗೆ ಬಂದ ಮಗಳನ್ನು ಆಕೆಯ ತಂದೆ ಮುಖೇಶ್ ಸಿಂಗ್ ಎಂಬಾತ ನಿಗೂಢವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಘಟನೆ?
ಸಮಷ್ಟಿಪುರ ಜಿಲ್ಲೆಯ ಮೊಹಿಯುದ್ದೀನ್ ನಗರದ ಟಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಕ್ಷಿ ಕೆಲ ತಿಂಗಳುಗಳಿಂದ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ತನ್ನ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲ ಎಂದು ಆಕೆ ಕೆಲ ವಾರಗಳ ಹಿಂದೆ ಪ್ರಿಯಕರನೊಂದಿಗೆ ದೆಹಲಿಗೆ ಪರಾರಿಯಾಗಿದ್ದಳು. ಈ ವಿಚಾರ ಟಾಡಾ ಗ್ರಾಮದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಮನೆಯವರು ಆಕೆಯ ಸ್ನೇಹಿತರ ನೆರವಿನಿಂದ ಸಾಕ್ಷಿಯನ್ನು ಸಂಪರ್ಕಿಸಿ ಆಕೆ ಮನೆಗೆ ಬರುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಆಕೆ ಒಪ್ಪಿರಲಿಲ್ಲವಾದರೂ ಬಳಿಕ ಮನೆಯವರು ಮದುವೆಗೆ ಒಪ್ಪಿದ್ದಾರೆ ಎಂದು ಪುಸಲಾಯಿಸಿದ್ದಾರೆ. ಆಗ ಸಾಕ್ಷಿ ಮನೆಗೆ ಬರಲು ಒಪ್ಪಿದ್ದಾಳೆ.
ಇದಾದ ಕೆಲವೇ ದಿನಗಳಲ್ಲಿ ಸಮಷ್ಠಿ ಪುರಕ್ಕೆ ಸಾಕ್ಷಿ ವಾಪಸ್ ಆಗಿದ್ದಾಳೆ. ಸಾಕ್ಷಿ ಒಂದು ವಾರದ ಹಿಂದೆಯಷ್ಟೇ ದೆಹಲಿಯಿಂದ ಮೊಹಿಯುದ್ದೀನ್ ನಗರಕ್ಕೆ ಬಂದಿದ್ದಳು. ಈ ಸಮಯದಲ್ಲಿ ಯುವತಿ ಮತ್ತೆ ಇದ್ದಕ್ಕಿದ್ದಂತೆ ಮತ್ತೆ ಕಣ್ಮರೆಯಾದಳು. ಮೃತಳ ತಾಯಿಗೆ ಅನುಮಾನ ಬಂದಾಗ, ಆಕೆ ತನ್ನ ಗಂಡನನ್ನು ಕೇಳಿದ್ದಾಳೆ. ಆಗ ತಂದೆ ಮುಕೇಶ್ ಸಿಂಗ್ ಮಗಳು ಮತ್ತೆ ಮನೆ ಬಿಟ್ಟು ಹೋಗಿದ್ದಾಳೆಂದು ಉಡಾಫೆ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಸಾಕ್ಷಿ ತಾಯಿ ತನ್ನ ಸಹೋದರ ವಿಪಿನ್ ಸಿಂಗ್ ಮತ್ತು ಸಹೋದರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ಸಾಕ್ಷಿ ಕೊಲೆಯಾಗಿರುವ ಕುರಿತು ಅನುಮಾನ ವ್ಯಕ್ತಪಡಿಸಿದಾಗ ಬೇರೆ ದಾರಿಯಲ್ಲದೇ ಪೊಲೀಸ್ ದೂರು ನೀಡಿದ್ದಾರೆ.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ತಡರಾತ್ರಿ ಪೊಲೀಸರು ಮನೆಯ ಹಿಂದಿನ ಸ್ನಾನಗೃಹಕ್ಕೆ ಬೀಗ ಹಾಕಿರುವುದನ್ನು ನೋಡಿದಾಗ, ಅದನ್ನು ತೆರೆದಾಗ ಅದರೊಳಗೆ ಹುಡುಗಿಯ ಶವ ಪತ್ತೆಯಾಗಿದೆ. ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ತಂದೆ ಮುಖೇಶ್ ಸಿಂಗ್ ಹೇಳಿಕೆಯಲ್ಲಿ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿಯನ್ನು ಉಸಿರುಗಟ್ಟಿಸಿ ಕೊಂದು ಆಕೆಯನ್ನು ಯಾರೂ ಬಳಸದ ಮನೆ ಹಿಂದಿನ ಬಾತ್ ರೂಮಿನಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಮುಖೇಶ್ ಸಿಂಗ್ ಸಾಕ್ಷಿ ಪ್ರಿಯಕರನನ್ನು ಕೊಲ್ಲಲು ಯೋಜಿಸಿದ್ದ. ಅದಕ್ಕಾಗಿ ಆತನ ಗ್ರಾಮದಲ್ಲಿ ತಿರುಗಾಡಿದ್ದ. ಆದರೆ ಆತ ಗ್ರಾಮದಲ್ಲಿ ಇರಲಿಲ್ಲ. ಬಳಿಕ ಮಗಳ ಮನವೊಲಿಕೆಗೆ ಯತ್ನಿಸಿದ್ದಾನೆ. ಆದರೆ ಆಕೆ ಒಪ್ಪದಿದ್ದರಿಂದ ಆಕೆಯನ್ನು ಕೊಂದು ಮುಗಿಸಿದ್ದಾನೆ ಎನ್ನಲಾಗಿದೆ.
Advertisement