'ಮಗಳೇ ಹರ್ಷಿತಾ, ನೀನು ಮಾಡಿದ್ದು ಸರಿಯಲ್ಲ...': ಅನ್ಯ ಸಮುದಾಯದ ಯುವಕನೊಂದಿಗೆ ಯುವತಿ ಮದುವೆ; ತಂದೆ ಆತ್ಮಹತ್ಯೆ!

ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾದ ವ್ಯಕ್ತಿ ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ರೂಂನಲ್ಲಿ ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡಿದ್ದಾರೆ.
ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್
ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್
Updated on

ಭೋಪಾಲ್: ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅನ್ಯ ಸಮುದಾಯದ ಯುವಕನೊಂದಿಗೆ ಮಗಳು ಮದುವೆಯಾಗಿದ್ದಕ್ಕೆ ನೊಂದುಕೊಂಡ 49 ವರ್ಷದ ಮೆಡಿಕಲ್ ಸ್ಟೋರ್ ಮಾಲೀಕ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾದ ವ್ಯಕ್ತಿ ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ರೂಂನಲ್ಲಿ ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡಿದ್ದಾರೆ. ಗುಂಡೇಟಿನ ಶಬ್ದ ಕೇಳಿದ ನಂತರ ಕುಟುಂಬ ಸದಸ್ಯರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಲಾಲ್‌ಚಂದಾನಿ ಅವರ ಪ್ರಕಾರ, ರಿಷಿರಾಜ್ ಅವರ ಮಗಳು ಸುಮಾರು 15 ದಿನಗಳ ಹಿಂದೆ ನೆರೆಯ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಪತ್ತೆಹಚ್ಚಿ ಇಂದೋರ್‌ಗೆ ಕರೆತರಲಾಯಿತು. ನಂತರದ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಮಗಳು ತಾನು ಕಾನೂನುಬದ್ಧವಾಗಿ ಮದುವೆಯಾಗಿರುವುದಾಗಿ ಮತ್ತು ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಹೇಳಿದ್ದಾಳೆ.

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವ ಮಗಳ ನಿರ್ಧಾರದಿಂದ ನೊಂದಿದ್ದ ರಿಷಿರಾಜ್, ತನ್ನ ಮಗಳ ಆಧಾರ್ ಕಾರ್ಡ್‌ ಪ್ರಿಂಟೌಟ್‌ನ ಹಿಂಬದಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

'ಹರ್ಷಿತಾ, ನೀನು ತಪ್ಪು ಮಾಡಿದೆ, ನಾನು ಹೋಗುತ್ತಿದ್ದೇನೆ. ನಾನು ನಿಮ್ಮಿಬ್ಬರನ್ನೂ ಕೊಲ್ಲಬಹುದಿತ್ತು. ಆದರೆ, ನಾನು ನನ್ನ ಮಗಳನ್ನು ಹೇಗೆ ಕೊಲ್ಲಲಿ?' ಎಂದು ಬರೆಯಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್
ಮರ್ಯಾದಾ ಹತ್ಯೆ: ತಮ್ಮ ಆಯ್ಕೆಯ ಯುವಕನ ಜೊತೆ ಮದುವೆಗೆ ನಿರಾಕರಿಸಿದ್ದಕ್ಕೆ ತಂದೆಯಿಂದಲೇ ಮಗಳ ಹತ್ಯೆ!

'ಮಗಳೇ, ನೀನು ಮಾಡಿದ್ದು ಸರಿಯಲ್ಲ... ಮತ್ತು ಸ್ವಲ್ಪ ಹಣಕ್ಕಾಗಿ ಇಡೀ ಕುಟುಂಬವನ್ನೇ ಬಲಿಕೊಡುವ ವಕೀಲ - ಅವರಿಗೂ ಹೆಣ್ಣು ಮಕ್ಕಳಿಲ್ಲವೇ? ಅವರಿಗೆ ತಂದೆಯ ನೋವು ಅರ್ಥವಾಗುವುದಿಲ್ಲವೇ? ಒಂದು ಇಡೀ ಕುಟುಂಬ ನಾಶವಾಗಿದೆ ಮತ್ತು ಈಗ ಸಮಾಜದಲ್ಲಿ ಏನೂ ಉಳಿದಿಲ್ಲ. ಇದರಿಂದ ನಮ್ಮ ಇಡೀ ಕುಟುಂಬ ನಾಶವಾಗಿದೆ. ನನ್ನ ನೋವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ' ಎಂದು ಬರೆದಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಮಾತನಾಡಿ, 'ಇದು ಅತ್ಯಂತ ದುರದೃಷ್ಠಕರ ಘಟನೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಗಳು ಬೇರೆ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿದ್ದಳು. ತಂದೆ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಡೆತ್ ನೋಟ್ ಈ ಕಳವಳಗಳನ್ನು ಪ್ರತಿಬಿಂಬಿಸುತ್ತದೆ' ಎಂದು ತಿಳಿಸಿದರು.

ರಿಷಿರಾಜ್ ನಾಕಾ ಚಂದ್ರಬದ್ನಿ ಪ್ರದೇಶದಲ್ಲಿ ಬಾಬು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು ಮತ್ತು ಭೈರೋ ಬಾಬಾ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದರು.

ಮೃತರ ಸಂಬಂಧಿಕರು ರಿಷಿರಾಜ್ ಅವರ ಮಗಳನ್ನು ಮದುವೆಯಾದ ಯುವಕನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳಿಯರು ಮಧ್ಯಪ್ರವೇಶಿಸಿ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆ ಮತ್ತು ನಂತರದ ಹಲ್ಲೆ ಎರಡರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com