
ವಿಶಾಖಪಟ್ಟಣಂ: 9 ತಿಂಗಳ ತುಂಬು ಗರ್ಭಿಣಿ ಮಹಿಳೆಯನ್ನು ಆಕೆಯ ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಮಧುರವಾಡ ಆರ್‌ಟಿಸಿ ಡಿಪೋ ಬಳಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಅನಕಪಲ್ಲಿ ಜಿಲ್ಲೆಯ ನರಸೀಪಟ್ಣನಿಯ 27 ವರ್ಷದ ಕೇದಾರಿಶೆಟ್ಟಿ ಅನುಷಾ (27) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೊಂದ ಪಾಪಿ ಪತಿಯನ್ನು 28 ವರ್ಷದ ಗೆದ್ದಾಡ ಜ್ಞಾನೇಶ್ವರ್ ಎಂದು ಹೇಳಲಾಗಿದೆ.
2023ರಲ್ಲಿ ಅನುಷಾ ಮತ್ತು ಜ್ಞಾನೇಶ್ವರ್ ಪ್ರೀತಿಸಿ ವಿವಾಹವಾಗಿದ್ದರು. ಒಂದು ವರ್ಷದ ಹಿಂದೆ, ದಂಪತಿಗಳು ಮಿಥಿಲಾಪುರಿಯ ವುಡಾ ಕಾಲೋನಿಯಲ್ಲಿ ಮನೆ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಜ್ಞಾನೇಶ್ವರ ರಾವ್ ಸ್ಕೌಟ್ಸ್ ಮತ್ತು ಗೈಡ್ಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಜೋಡಿ ಆಗಾಗ ಜಗಳವಾಡುತ್ತಿದ್ದರು. ಒಂದು ವರ್ಷದಿಂದ ಜ್ಞಾನೇಶ್ವರ್ ಅನುಷಾಳನ್ನು ಬಿಟ್ಟು ಬಿಡಲು ನಿರ್ಧರಿಸಿದ್ದ. ಇದಕ್ಕಾಗಿ ಸಾಕಷ್ಟು ನಾಟಕ ಮಾಡುತ್ತಿದ್ದ ಎಂದು ಅನುಷಾ ಪೋಷಕರು ಹೇಳಿದ್ದಾರೆ.
ಗರ್ಭಿಣಿಯಾಗಿದ್ದ ಅನುಷಾ
ಅನುಷಾ ಪೋಷಕರು ಆರೋಪಿಸಿರುವಂತೆ ಜ್ಞಾನೇಶ್ವರ್ ಅನುಷಾಳನ್ನು ತೊರೆಯಲು ನಿರ್ಧರಿಸಿದ್ದ. ಇದಕ್ಕಾಗಿ ಆತ ನಿತ್ಯ ಒಂದಲ್ಲಾ ಒಂದು ನಾಟಕ ಮಾಡುತ್ತಿದ್ದ. ತನೆಗೆ ಕ್ಯಾನ್ಸರ್ ಇದೆ. ಆದಷ್ಟು ಬೇಗ ಸಾಯುತ್ತೇನೆ. ನೀನು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ನಿನ್ನ ತಾಯಿ ಮನೆಗೆ ಹೋಗು ಎಂದು ಅನುಷಾಳನ್ನು ಒತ್ತಾಯಿಸುತ್ತಿದ್ದ. ಅನುಷಾ ಅದಕ್ಕೆ ಒಪ್ಪಲಿಲ್ಲ, ಆಕೆ ನಿಮ್ಮೊಂದಿಗೇ ಇರುವುದಾಗಿ ಹೇಳಿದಳು.
ಇದಾದ ಆರು ತಿಂಗಳ ನಂತರ ಮತ್ತೊಂದು ನಾಟಕ ಆರಂಭಿಸಿದ ಜ್ಞಾನೇಶ್ವರ್,'ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ, ಅವರು ನಮ್ಮನ್ನು ಬದುಕಲು ಬಿಡುವುದಿಲ್ಲ. ಅವರು ನನಗೆ ವಿಚ್ಛೇದನ ನೀಡುವಂತೆ ನಿನಗೆ ಹೇಳು ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದ. ಆದರೆ ಅನುಷಾ ಅದಕ್ಕೂ ಒಪ್ಪಲಿಲ್ಲ. ಅಲ್ಲದೆ ಈ ವಿಚಾರವನ್ನು ಅನುಷಾ ಆಗಾಗ ಹೇಳುತ್ತಿದ್ದಳು. ಅಷ್ಟರಲ್ಲೇ ಆಕೆ ಗರ್ಭಿಣಿಯಾಗಿದ್ದಳು. ನಾವು ಕೂಡ ಎಲ್ಲವೂ ಸರಿ ಹೋಯಿತು ಎಂದು ಭಾವಿಸಿದ್ದೆವು. ಇದೇ ಸೋಮವಾರ ವೈದ್ಯರು ಆಕೆಗೆ ಡೆಲಿವರಿ ಡೇಟ್ ನೀಡಿದ್ದರು.
"ಈ ಸಮಯದಲ್ಲಿ, ಅನುಷಾ ಗರ್ಭಿಣಿಯಾದಳು. ಹೆರಿಗೆ ಸನ್ನಿಹಿತವಾಗಿರುವುದರಿಂದ ವೈದ್ಯರು ಭಾನುವಾರ ಆಸ್ಪತ್ರೆಗೆ ಸೇರಲು ಸಲಹೆ ನೀಡಿದರು. ಆದರೆ, ಜ್ಞಾನೇಶ್ವರ್ ಭಾನುವಾರ ಬೇಡ.. ಸೋಮವಾರ ಆಸ್ಪತ್ರೆಗೆ ಸೇರುವುದಾಗಿ ಹೇಳಿದ.
ಸೋಮವಾರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಜ್ಞಾನೇಶ್ವರ್ ಆಕೆಯನ್ನು ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಂದು ಹಾಕಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.
ಕೊಲೆ ಮಾಡಿ ಅಜ್ಜಿಗೆ ಕರೆ ಮಾಡಿದ್ದ 'ವಿಕೃತ'
ಅನುಷಾ ಮಲಗಿದ್ದ ವೇಳೆ ಆಕೆಯ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಅನುಷಾಳ ಅಜ್ಜಿಗೆ ಕರೆ ಮಾಡಿ ಅನುಷಾ ಪ್ರಜ್ಞಾಹೀನಳಾಗಿದ್ದಾಳೆ ಎಂದು ಹೇಳಿದ್ದಾನೆ. ಇದರಿಂದ ಗಾಬರಿಯಾದ ಅನುಷಾಳ ಅಜ್ಜಿ ರೂಮಿನ ಬಾಗಿಲು ತಟ್ಟಿದ್ದಾರೆ.
ಆದರೆ ಬಾಗಿಲು ತೆರೆದಿಲ್ಲ. ಬಲವಂತವಾಗಿ ಬಾಗಿಲು ತೆರೆದು ಒಳಗೆ ಹೋದಾಗ ಮಂಚದ ಮೇಲೆ ಅನುಷಾ ನಿತ್ರಾಣಳಾಗಿ ಬಿದ್ದಿದ್ದಳು. ಈ ವೇಳೆ ಜ್ಞಾನೇಶ್ವರ್ ಕೂಡ ಅಲ್ಲಿಯೇ ಏನೂ ತಿಳಿಯದಂತೆ ನಿಂತಿದ್ದ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಅದಾಗಲೇ ಸತ್ತಿದ್ದಾಳೆ ಎಂದು ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಶಾಖಪಟ್ಟಣ ಕೆಜಿಎಚ್‌ಗೆ ಕೊಂಡೊಯ್ಯಲಾಯಿತು.
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅನುಮಾನದ ಮೇರೆಗೆ ಗಂಡ ಜ್ಞಾನೇಶ್ವರ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಸಂಗತಿ ಬಾಯಿ ಬಿಟ್ಟಿದ್ದಾನೆ. ವಿಚಾರಣೆ ವೇಳೆ ಪತ್ನಿ ಅನುಷಾಗೆ ನನ್ನ ಮೇಲೆ ಅನುಮಾನವಿತ್ತು. ನಾನು ಅಕ್ರಮ ಸಂಬಂಧ ಹೊಂದಿದ್ದೇನೆ ಎಂದು ನಿತ್ಯ ಹಿಂಸೆ ನೀಡುತ್ತಿದ್ದಳು. ಅನುಷಾ ತನ್ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದ. ಇದೇ ಬೇಸರದಿಂದ ಆಕೆಯ ಕತ್ತು ಹಿಸುಕಿ ಕೊಂದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಸಿಐ ಬಾಲಕೃಷ್ಣ ಹೇಳಿದ್ದಾರೆ. ಪ್ರಸ್ತುತ ಜ್ಞಾನೇಶ್ವರ್ ನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Advertisement