
ದಿಬ್ರುಗಢ: ಅಸ್ಸಾಂನ ದಿಬ್ರುಗಢ ಜಿಲ್ಲೆಯ ಬಾರ್ಬರುವಾದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಪತ್ನಿ ಹಾಗೂ 16 ವರ್ಷದ ಮಗಳಿಂದಲೇ ಉದ್ಯಮಿಯೊಬ್ಬರು ಹತ್ಯೆಯಾಗಿದ್ದಾರೆ. ಈ ಸಂಬಂಧ ಮಹಿಳೆ, ಆಕೆಯ ಮಗಳು ಮತ್ತು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
52 ವರ್ಷದ ಉತ್ತಮ್ ಗೊಗೋಯ್ ಜುಲೈ 25 ರಂದು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ದರೋಡೆಯಂತೆ ತೋರುತ್ತಿದ್ದ ಪ್ರಕರಣದಲ್ಲಿ ಕುಟುಂಬದ ಸದಸ್ಯರೇ ಸೇರಿ ಕೊಲೆ ಮಾಡಿದ್ದಾರೆ.
ಉತ್ತಮ್ ಗೊಗೊಯ್ ಅವರ ಪತ್ನಿ ಬಾಬಿ ಸೋನೊವಾಲ್ ಗೊಗೊಯ್ ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ಮಗಳು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
9 ನೇ ತರಗತಿಯ ಹದಿಹರೆಯದ ಹುಡುಗಿಗೆ ಕುಟುಂಬದ ಹೊರಗಿನ ಇಬ್ಬರು ಆರೋಪಿಗಳಲ್ಲಿ ಒಬ್ಬರಾದ 21 ವರ್ಷದ ದೀಪಜ್ಯೋತಿ ಬುರಾಗೊಹೈನ್ ಜೊತೆಗೆ ಸಂಬಂಧ ಇತ್ತು. ಈತನ ಜೊತೆಗೆ ಅಪ್ರಾಪ್ತನಿಗೆ ಹೆಚ್ಚಿನ ಹಣ ಹಾಗೂ ಚಿನ್ನಾಭರಣ ನೀಡುವ ಮೂಲಕ ಉದ್ಯಮಿ ಕೊಲೆಗೆ ಆತನ ಪತ್ನಿ ಹಾಗೂ ಪುತ್ರಿಯೇ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳು ಆರಂಭದಲ್ಲಿ ಕೊಲೆಯನ್ನು ದರೋಡೆ ಎಂದು ಬಿಂಬಿಸಲು ಯತ್ನಿಸಿ ವಿಫಲರಾಗಿದ್ದಾರೆ. ಫೋರೆನ್ಸಿಕ್ ಪುರಾವೆಗಳು ಕೂಡಾ ಅವರು ತೊಡಗಿಸಿಕೊಂಡಿರುವುದನ್ನು ತೋರಿಸಿವೆ. ಆರೋಪಿಗಳಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ದಿಬ್ರುಗಢದ ಹಿರಿಯ ಪೊಲೀಸ್ ಅಧೀಕ್ಷಕ ಎಸ್‌ಎಸ್‌ಪಿ ರಾಕೇಶ್ ರೆಡ್ಡಿ ಹೇಳಿದ್ದಾರೆ.
52 ವರ್ಷದ ಉದ್ಯಮಿಯನ್ನು ಏಕೆ ಕೊಂದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ರೆಡ್ಡಿ ತಿಳಿಸಿದ್ದಾರೆ.
Advertisement