

ನವದೆಹಲಿ: GRAP-IV ನಿರ್ಬಂಧಗಳು ಕೊನೆಗೊಂಡ ನಂತರವೂ ದೆಹಲಿ ಸರ್ಕಾರವು ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ(ಪಿಯುಸಿ) ಇಲ್ಲದೆ, ಇಂಧನ ಇಲ್ಲ' ನೀತಿಯನ್ನು ಮುಂದುವರಿಸಲಿದೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಮಂಗಳವಾರ ತಿಳಿಸಿದ್ದಾರೆ.
ಇದೇ ವೇಳೆ ನಗರದಾದ್ಯಂತ ಜಲಮೂಲಗಳ ಪುನರುಜ್ಜೀವನಕ್ಕಾಗಿ ಸರ್ಕಾರವು 100 ಕೋಟಿ ರೂ.ಗಳನ್ನು ಮಂಜೂರು ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿರ್ಸಾ, GRAP-IV ಸಡಿಲಿಕೆಯ ನಂತರವೂ ವಾಯು ಮಾಲಿನ್ಯ ವಿರೋಧಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮುಂದುವರಿಯುತ್ತದೆ ಮತ್ತು ಮಾಲಿನ್ಯ ನಿಯಂತ್ರಣ(ಪಿಯುಸಿ) ಪ್ರಮಾಣಪತ್ರವಿಲ್ಲದೆ ಯಾವುದೇ ವಾಹನಕ್ಕೆ ನಗರದಲ್ಲಿ ಸಂಚರಿಸಲು ಅನುಮತಿಸಲಾಗುವುದಿಲ್ಲ ಎಂದರು.
ಹಲವಾರು ಪಿಯುಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು 12 ಕೇಂದ್ರಗಳು ದೋಷಯುಕ್ತ ಉಪಕರಣಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ತಪಾಸಣೆ ವೇಳೆ ಬಹಿರಂಗವಾಗಿದೆ ಎಂದು ಅವರು ಹೇಳಿದರು.
ಈ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ನೋಟಿಸ್ ನೀಡಲಾಗಿದೆ. "ಯಾರಾದರೂ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸಿರ್ಸಾ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಸುಮಾರು 1,000 ಜಲಮೂಲಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಮತ್ತು ಸರ್ಕಾರವು ಈ ಉದ್ದೇಶಕ್ಕಾಗಿ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಿದೆ ಎಂದು ಸಚಿವರು ಹೇಳಿದರು.
Advertisement