

ಚೆನ್ನೈ: ವಲಸೆ ಕಾರ್ಮಿಕನ ಮೇಲೆ ಬಾಲಕರ ಗುಂಪೊಂದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ರೀಲ್ಸ್ ಮಾಡಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ಘಟನೆ ಬೆನ್ನಲ್ಲೇ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಚೆನ್ನೈನಿಂದ ತಿರುತ್ತಣಿಗೆ ತೆರಳುತ್ತಿದ್ದ ಉಪನಗರ ರೈಲಿನೊಳಗೆ ನಾಲ್ವರು ಹದಿಹರೆಯದ ಬಾಲಕರು ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳಲ್ಲಿ ಒಬ್ಬ ಇನ್‌ಸ್ಟಾಗ್ರಾಮ್ ರೀಲ್ ಆಗಿ ಹಲ್ಲೆಯ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಮಚ್ಚನ್ನು ಹಿಡಿದು ತಮಿಳು ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿದ್ದಾನೆ.
ಮತ್ತೊಂದು ವಿಡಿಯೊದಲ್ಲಿ ಆರೋಪಿಗಳು ಕಾರ್ಮಿಕನಿಗೆ ಮಚ್ಚಿನಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ನಂತರ ದಾಳಿಕೋರರಲ್ಲಿ ಒಬ್ಬರು ವಿಜಯದ ಚಿಹ್ನೆಯೊಂದಿಗೆ ಕಾರ್ಮಿಕನ ಪಕ್ಕದಲ್ಲಿ ಪೋಸ್ ನೀಡಿದ್ದಾನೆ. ಈ ದಾಳಿಯಲ್ಲಿ ಕಾರ್ಮಿಕ ರಕ್ತಸಿಕ್ತನಾಗಿ ಗಂಭೀರ ಗಾಯಗೊಂಡಿದ್ದಾನೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಈ ಪೈಕಿ ಮೂವರನ್ನು ಚೆಂಗಲ್ಪಟ್ಟುವಿನ ಬಾಲಾಪರಾಧಿ ಜೈಲಿಗೆ ಕಳುಹಿಸಲಾಗಿದೆ. ನಾಲ್ಕನೇ ಆರೋಪಿಯನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಸುರಕ್ಷತೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Advertisement