
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡು ಟ್ರೇಡ್ ವಾರ್ ಆರಂಭಿಸಿರುವ ಪರಿಣಾಮ ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ ಉಂಟಾಗಿದೆ. ಇದರ ಪರಿಣಾಮ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗಿದೆ.
ಫೆ.05-06 ರಂದು ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾಗೆ ಆಮದಾಗುವ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಸದ್ಯಕ್ಕೆ ಹೂಡಿಕೆಗೆ ಚಿನ್ನವೇ ಸೇಫ್ ಎಂಬ ವಾತಾವರಣ ನಿರ್ಮಾಣವಾಗಿದ್ದು, ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಪರಿಣಾಮ ಸೋಮವಾರದ ಆರಂಭದಲ್ಲಿ ಚಿಕಾಗೋ ಮರ್ಕೆಂಟೈಲ್ ಎಕ್ಸ್‌ಚೇಂಜ್ ನಲ್ಲಿ ಪ್ರತಿ ಔನ್ಸ್ ಗೆ 2930 ಡಾಲರ್ ಗಡಿ ದಾಟಿದೆ.
ದೆಹಲಿಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ಗೆ 88,080 ರೂಪಾಯಿಗಳಿಗೆ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಮುಂಬೈ ನಲ್ಲಿ 10 ಗ್ರಾಮ್ ಚಿನ್ನದ ದರ 87,300 ರೂಪಾಯಿಗಳಿಂದ 87,990 ಗಳಿಗೆ ಏರಿಕೆಯಾಗಿದೆ.
ಅಖಿಲ ಭಾರತ ರತ್ನಗಳು ಮತ್ತು ಆಭರಣ ದೇಶೀಯ ಮಂಡಳಿ (GJC)ಯ ನಿರ್ದೇಶಕ ಮತ್ತು ಅಖಿಲ ಕೇರಳ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಜರ್, ಮಾತನಾಡಿ ದೇಶೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯ ಬೆಲೆ ಮಂಗಳವಾರದಿಂದ ಜಾರಿಗೆ ಬರಲಿದೆ ಎಂದು TNIE ಗೆ ತಿಳಿಸಿದ್ದಾರೆ. ಹಳದಿ ಲೋಹವು $2931 ರಷ್ಟು ಏರಿಕೆಯಾಗಿದ್ದು, ಇದು ದಾಖಲೆಯ ಅತ್ಯಧಿಕ ಬೆಲೆಯಾಗಿದೆ.
ಕಾಮಾ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ ಮಾತನಾಡಿ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ ಅಮೆರಿಕ-ಚೀನಾ ವ್ಯಾಪಾರ ಯುದ್ಧದ ಸಾಧ್ಯತೆಯೂ ಚಿನ್ನದ ಬೆಲೆ ಏರಿಕೆಗೆ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು. "ವ್ಯಾಪಾರ ಯುದ್ಧದ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳನ್ನು ಗಮನದಲ್ಲಿಟ್ಟುಕೊಂಡು, ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕ್ರಮವಾಗಿ $3000 ಮತ್ತು ದೇಶೀಯ ಮಾರುಕಟ್ಟೆಯಲ್ಲಿ ರೂ88,000 ಕ್ಕೆ ತಲುಪುವ ನಿರೀಕ್ಷೆಯಿದೆ" ಎಂದು ಅವರು ಹೇಳಿದರು.
Advertisement