
ಲಖನೌ: ಇಲ್ಲಿ ನಡೆಯುತ್ತಿದ್ದ ಮದುವೆಯೊಂದಕ್ಕೆ ಚಿರತೆಯೊಂದು ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಯಿತು. ಘಟನೆಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದು, ಜೀವ ಉಳಿಸಿಕೊಳ್ಳಲು ಓಡಿದ ವಧು-ವರರು ಕಾರಿನಲ್ಲಿ ಸಿಲುಕಿಕೊಳ್ಳುವಂತಾಯಿತು.
ನಗರದ ಬುದ್ಧೇಶ್ವರ ರಸ್ತೆ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಚಿರತೆ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿದರು. ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಚಿರತೆ ನುಗ್ಗುತ್ತಿದ್ದಂತೆ ಮಂಟಪದಲ್ಲಿ ಕುಳಿತಿದ್ದ ವಧು-ವರರೂ ಕೂಡ ಓಡಿ ಹೋಗಿ ಕಾರಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಪೊಲೀಸರ ಪ್ರಕಾರ, ಚಿರತೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ಚಿರತೆ ಹಿಡಿಯುವವರೆಗೂ, ವಧು ಮತ್ತು ವರರ ಕುಟುಂಬದವರು ಸುರಕ್ಷತೆಗಾಗಿ ತಮ್ಮ ವಾಹನಗಳಲ್ಲಿ ಕುಳಿತಿದ್ದರು ಎಂದು ಅತಿಥಿಯೊಬ್ಬರು ಹೇಳಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈಮಧ್ಯೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘಟನೆಯ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಘಟನೆಯು ರಾಜ್ಯ ಸರ್ಕಾರದ "ಭ್ರಷ್ಟಾಚಾರ"ದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಉತ್ತರ ಪ್ರದೇಶದ 'ಜುಮ್ಲಾಜೀವಿ' ಬಿಜೆಪಿ ಸರ್ಕಾರವು ಬೀದಿ ನಾಯಿಗಳ ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಂಡಿಲ್ಲ ಮತ್ತು ಇದೀಗ ರಾಜ್ಯ ರಾಜಧಾನಿಯಲ್ಲಿ 'ಚಿರತೆ' ಬಂದಿರುವುದು ವರದಿಯಾಗಿದೆ. ಲಖನೌನಲ್ಲಿ ಮದುವೆಗೆ ಚಿರತೆಯೊಂದು ನುಗ್ಗಿದ ಸುದ್ದಿ ಆತಂಕಕಾರಿಯಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಾಡಿನಲ್ಲಿ ಮಾನವನ ಅತಿಕ್ರಮಣ ಹೆಚ್ಚುತ್ತಿದೆ. ಹೀಗಾಗಿ, ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಇದರಿಂದ ಸಾಮಾನ್ಯ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ' ಎಂದಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೋ ಅಥವಾ ಇದು ಚಿರತೆ ಅಲ್ಲ, ದೊಡ್ಡ ಗಾತ್ರದ ಬೆಕ್ಕು ಎಂದು ಹೇಳಿ ಘಟನೆಯನ್ನು ಮುಚ್ಚಿಹಾಕುತ್ತದೆಯೋ ನೋಡಬೇಕು ಎಂದು ತಿಳಿಸಿದ್ದಾರೆ.
Advertisement