
ಪಾಟ್ನಾ: ಬಿಹಾರದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ವೇದಿಕೆಯ ಮೇಲೆ ಬಂದು ಆರ್ಕೆಸ್ಟ್ರಾ ನೃತ್ಯಗಾರ್ತಿಯೊಬ್ಬರ ಹಣೆಗೆ 'ಸಿಂಧೂರ' ಇಟ್ಟು ವಿವಾಹವಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಬಿಹಾರದ ಛಪ್ರಾದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ನರ್ತಕಿಯೊಬ್ಬಳ ನೃತ್ಯ ಪ್ರದರ್ಶನಕ್ಕೆ ಆಕರ್ಷಿತನಾದ ಯುವಕನೋರ್ವ ವೇದಿಕೆ ಹತ್ತಿ, ನೋಡ ನೋಡುತ್ತಲೇ ಯುವತಿಯನ್ನು ಹಿಡಿದೆಳೆದು, ಆಕೆಗೆ ಸಿಂಧೂರ ಹಚ್ಚಿ, ಆಕೆಯನ್ನು ತಕ್ಷಣ ಮದುವೆಯಾಗಿದ್ದಾನೆ. ಈ ಅನಿರೀಕ್ಷಿತ ಮಿಲನ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಅಚ್ಚರಿ ಎಂದರೆ ಡ್ಯಾನ್ಸರ್ ಯುವತಿ ಕೂಡ ಈ ಮದುವೆಯನ್ನು ಒಪ್ಪಿಕೊಂಡಿದ್ದು, ಆತನೊಂದಿಗೆ ಜೀವನ ನಡೆಸುವುದಾಗಿ ಹೇಳಿದ್ದಾಳೆ.
ಮದುವೆ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಯುವತಿ ಡ್ಯಾನ್ಸರ್ ಆಗಿ ಆಗಮಿಸಿದ್ದಳು. ಸಿನಿಮಾವೊಂದರ ಗೀತೆಗೆ ನೃತ್ಯ ಮಾಡುತ್ತಿದ್ದಾಗಲೇ ಅಲ್ಲಿದ್ದ ಯುವಕನೋರ್ವ ಆಕೆಯ ಡ್ಯಾನ್ಸ್ ನೋಡಿ ಇಷ್ಟಪಟ್ಟಿದ್ದಾನೆ. ಬಳಿಕ ಆಕೆಯೊಂದಿಗೆ ತಾನೂ ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು, ಆಕೆ ಕೂಡ ಆತನೊಂದಿಗೆ ನಗುತ್ತಲೇ ನೃತ್ಯ ಮಾಡಿದ್ದಾಳೆ.
ಈ ವೇಳೆ ಯುವಕ ನೋಡ ನೋಡುತ್ತಲೇ ಬಿಳಿ ಬಣ್ಣದ ಟವಲ್ ಅನ್ನು ಆಕೆಯ ಮೇಲೆ ಹೊದಿಸಿ ಆಕೆಯನ್ನು ಬಿಗಿದಪ್ಪಿ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಗಟ್ಟಿಯಾಗಿ ಹಿಡಿದ ಆತ ಸಿಂಧೂರ ಹಚ್ಚಿ ತನ್ನ ಪ್ರೀತಿ ನಿವೇದನೆ ಮಾಡಿದ್ದಾನೆ. ಈ ವೇಳೆ ಕಾರ್ಯಕ್ರಮ ಆಯೋಜಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸದ ಹಿನ್ನಲೆಯಲ್ಲಿ ಅವರೂ ಏನು ಮಾಡಲಾಗಲಿಲ್ಲ ಎಂದು ಹೇಳಲಾಗಿದೆ.
ಬಳಿಕ ಆಕೆ ಕೂಡ ವಿವಾಹಕ್ಕೆ ಒಪ್ಪಿಗೆ ನೀಡಿ ಆತ ಹಾಸಿದ್ದ ಟವೆಲ್ ಅನ್ನೇ ತನ್ನ ತಲೆ ಮೇಲೆ ಹಾಕಿಕೊಂಡು ವಿವಾಹ ಒಪ್ಪಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಬಿಹಾರದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement