

ಲಖನೌ: ಗಂಡಂದಿರು ವಿಕ್ಟೋರಿಯನ್ ಯುಗದ ಹಳೆಯ ಮನಸ್ಥಿತಿಯನ್ನು ಬಿಡಬೇಕು. ಹೆಂಡತಿಯ ದೇಹ, ಖಾಸಗಿತನ ಮತ್ತು ಹಕ್ಕುಗಳು ಅವಳ ಸ್ವಂತದ್ದಾಗಿದ್ದು, ಆಕೆಯು ಪತಿಯ ಯಾವುದೇ ನಿಯಂತ್ರಣ ಅಥವಾ ಮಾಲೀಕತ್ವಕ್ಕೆ ಒಳಪಡುವುದಿಲ್ಲ ಎಂಬುದನ್ನು ಅರಿತುಕೊಳ್ಳುವುದಕ್ಕೆ ಇದು ಸಕಾಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರಿದ್ದ ಪೀಠವು, ಪತ್ನಿಯು ಪತಿಯ ಅಧೀನಕ್ಕೆ ಒಳಪಟ್ಟಿರುವುದಿಲ್ಲ. ಆಕೆಯೂ ತನ್ನದೇ ಆದ ಹಕ್ಕುಗಳನ್ನು ಹೊಂದಿರುತ್ತಾಳೆ. ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಖಾಸಗಿತನವನ್ನು ಗೌರವಿಸುವುದು ಕಾನೂನಿನ ಬಾಧ್ಯತೆ ಮಾತ್ರವಲ್ಲ, ನಿಜವಾದ ಸಮಾನ ಸಂಬಂಧವನ್ನು ಬೆಳೆಸುವಲ್ಲಿ ಗಂಡನ ನೈತಿಕ ಕರ್ತವ್ಯವೂ ಆಗಿದೆ ಎಂದು ಹೇಳಿದೆ.
ತನ್ನ ಹೆಂಡತಿಯ ಅರಿವಿಗೆ ಬಾರದೆ ಮತ್ತು ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಆತ್ಮೀಯ ಕ್ಷಣಗಳ ವಿಡಿಯೋ ರೆಕಾರ್ಡ್ ಮಾಡಿ, ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ನಂತರ ಅದನ್ನು ಹೆಂಡತಿಯ ಸೋದರಸಂಬಂಧಿಯೊಂದಿಗೆ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನ್ಯಾಯಾಲಯ ಹೀಗೆ ಅಭಿಪ್ರಾಯಪಟ್ಟಿದೆ.
ತನ್ನ ವಿರುದ್ಧದ ಚಾರ್ಜ್ಶೀಟ್ ಅನ್ನು ಪ್ರಶ್ನಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಪ್ರಕರಣದ ಆದೇಶ ಮತ್ತು ಸಂಪೂರ್ಣ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬೇಕು. ದೂರುದಾರರು ಕಾನೂನುಬದ್ಧವಾಗಿ ಪತಿಯಾಗಿರುವುದರಿಂದ ಐಟಿ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಯಾವುದೇ ಅಪರಾಧ ಮಾಡಿಲ್ಲ ಎಂದು ವಾದಿಸಿದ್ದರು.