BPSC ಪರೀಕ್ಷೆ ವಿವಾದ: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ; Video

ಪೊಲೀಸರು ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾ ಏಮ್ಸ್‌ಗೆ ಕರೆದೊಯ್ದಿದ್ದಾರೆಂದು ಜನ್ ಸುರಾಜ್ ಪಕ್ಷದ ಬೆಂಬಲಿಗರು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Updated on

ಪಾಟ್ನಾ: ಬಿಹಾರ ಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ನಡೆಸುತ್ತಿದ್ದ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಿಹಾರ ಲೋಕಸೇವಾ ಆಯೋಗ ನಡೆಸಿದ್ದ 70ನೇ ಸಂಯುಕ್ತ (ಪ್ರಿಲಿಮಿನರಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಶಾಂತ್​ ಕಿಶೋರ್​ ಬೆಂಬಲಿಸಿ, ಜನವರಿ 2ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಸೋಮವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ 10 ಪೊಲೀಸ್ ಸಿಬ್ಬಂದಿಯೊಂದಿಗೆ ಪೊಲೀಸ್​ ಅಧಿಕಾರಿಗಳು ಆಗಮಿಸಿ ಬಿಪಿಎಸ್‌ಸಿ ಅಭ್ಯರ್ಥಿಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಕಿಶೋರ್ ಅವರನ್ನು, ಬೆಂಬಲಿಗರ ಪ್ರತಿರೋಧದ ನಡುವೆಯೂ ಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ.

ಪೊಲೀಸರು ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಪಾಟ್ನಾ ಏಮ್ಸ್‌ಗೆ ಕರೆದೊಯ್ದಿದ್ದಾರೆಂದು ಜನ್ ಸುರಾಜ್ ಪಕ್ಷದ ಬೆಂಬಲಿಗರು ಹೇಳಿದ್ದಾರೆ.

ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರಶೇಖರ್ ಸಿಂಗ್ ಅವರು ಮಾತನಾಡಿ, "ಹೌದು, ಗಾಂಧಿ ಮೈದಾನದಲ್ಲಿ ಧರಣಿ ನಡೆಸುತ್ತಿದ್ದ ಕಿಶೋರ್ ಮತ್ತು ಅವರ ಬೆಂಬಲಿಗರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಈಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿಭಟನೆ ಕಾನೂನುಬಾಹಿರವಾಗಿತ್ತು. ನಿರ್ಬಂಧಿತ ಸ್ಥಳದ ಬಳಿ ಧರಣಿ ನಡೆಸುತ್ತಿದ್ದರು. ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಮೀಸಲಾದ ಸ್ಥಳವಾದ ಗರ್ದಾನಿ ಬಾಗ್‌ಗೆ ಧರಣಿ ನಡೆಸುವಂತೆ ಜಿಲ್ಲಾಡಳಿತವು ಪದೇ ಪದೇ ವಿನಂತಿಸಿದರೂ ಅವರು ಸ್ಥಳದಿಂದ ಹೋಗಲಿಲ್ಲ. ಹೀಗಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ಕಿಶೋರ್ ಅವರ ಆರೋಗ್ಯ ಪರಿಶೀಲನೆ ನಡೆಸಿರುವ ವೈದ್ಯರು, ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ಹೇಳಇದ್ದಾರೆಂದು ಜಿಲ್ಲಾಡಳಿತ ಮಂಡಳಿ ಹೇಳಿಕ ನೀಡಿದೆ.

ಕಿಶೋರ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಾಗ, ಅವರ ಬೆಂಬಲಿಗರು ರಸ್ತೆ ತಡೆ ನಡೆಸಲು ಪ್ರಯತ್ನಿಸಿದರು. ಏಮ್ಸ್ ಹೊರಗೆ ಜಮಾಯಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ್ದರು. ಕಿಶೋರ್ ಅವರ ಬೆಂಬಲಿಗರನ್ನು ಚದುರಿಸಲು ಬಲಪ್ರಯೋಗ ಮಾಡಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಶಾಂತ್ ಕಿಶೋರ್
BPSC ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ

ಡಿಸೆಂಬರ್ 13ರಂದು ನಡೆದಿದ್ದ ಬಿಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಬೆಂಬಲ ವ್ಯಕ್ತಪಡಿಸಿ ಜನವರಿ 2ರಿಂದ ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ, ಡಿಸೆಂಬರ್ 13ರಂದು ನಡೆದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪ ಕೇಳಿ ಬಂದಿದ್ದ ಹಿನ್ನೆಲೆ, ಆಯ್ದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವಂತೆ ಬಿಪಿಎಸ್‌ಸಿ ಆದೇಶಿಸಿತ್ತು.

ಅದರಂತೆ, ಜನವರಿ 4ರಂದು ರಾಜ್ಯದ 22 ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆದಿದೆ. ಒಟ್ಟು 12,012 ಅಭ್ಯರ್ಥಿಗಳಲ್ಲಿ, ಸುಮಾರು 8,111 ಮಂದಿ ಮರು ಪರೀಕ್ಷೆಗಾಗಿ ತಮ್ಮ ಪ್ರವೇಶ ಕಾರ್ಡ್‌ಗಳನ್ನು (ಹಾಲ್‌ ಟಿಕೆಟ್‌) ಡೌನ್‌ಲೋಡ್ ಮಾಡಿಕೊಂಡಿದ್ದರು. ಆದರೆ, ಮರುಪರೀಕ್ಷೆಗೆ 5,943 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಯಾವುದೇ ಸಮಸ್ಯೆಗಳಿಲ್ಲದೆ ಎಲ್ಲಾ ಕೇಂದ್ರಗಳಲ್ಲಿ ಬಹಳ ಯಶಸ್ವಿಯಾಗಿ ಮರು ಪರೀಕ್ಷೆ ನಡೆಸಲಾಗಿದೆ ಎಂದು ಬಿಪಿಎಸ್‌ಸಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com