
ಗೋರಖ್ಪುರ (ಉತ್ತರ ಪ್ರದೇಶ): ಗಂಡಂದಿರ ಕುಡಿತದ ಚಟಕ್ಕೆ ಬೇಸತ್ತ ಇಬ್ಬರು ಮಹಿಳೆಯರು ಮನೆ ತೊರೆದು ಪರಸ್ಪರ ಮದುವೆಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಡಿಯೋರಿಯಾದ ಚೋಟಿ ಕಾಶಿ ಎಂದೂ ಕರೆಯಲ್ಪಡುವ ಶಿವ ದೇವಾಲಯದಲ್ಲಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಇಬ್ಬರೂ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಮೂಲಕ ಪರಿಚಯವಾಗಿದ್ದು, ಇಬ್ಬರ ಗಂಡಂದಿರು ಕೂಡ ಮದ್ಯದ ಚಟಕ್ಕೆ ದಾಸರಾಗಿದ್ದಲ್ಲದೇ, ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದರು. ಇಬ್ಬರದ್ದು ಬಹುತೇಕ ಒಂದೇ ರೀತಿಯ ಪರಿಸ್ಥಿತಿ ಇದ್ದ ಹಿನ್ನೆಲೆ ಅವರು ಆಪ್ತರಾಗಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇಗುಲದಲ್ಲಿ ಮದುವೆ ಆಗುವಾಗ ಗುಂಜಾ ವರನ ಪಾತ್ರ ನಿರ್ವಹಿಸಿದ್ದು, ಕವಿತಾ ಹಣೆಗೆ ಸಿಂಧೂರ ಹಚ್ಚಿದ್ದಾರೆ. ಬಳಿಕ ಪರಸ್ಪರ ಹಾರ ಬದಲಾಯಿಸಿಕೊಂಡು, ಸಪ್ತಪದಿ ತುಳಿದಿದ್ದಾರೆ.
ಈ ಕುರಿತು ಮಾತನಾಡಿರುವ ಗುಂಜು ಅವರು, ನಾವಿಬ್ಬರು ನಮ್ಮ ಗಂಡಂದಿರ ಕುಡಿತದ ಚಟ ಮತ್ತು ದೌರ್ಜನ್ಯದ ನಡುವಳಿಕೆಯಿಂದ ಬೇಸತ್ತು ಹೋಗಿದ್ದೆವು. ಇದು ನಮ್ಮಿಬ್ಬರ ನಡುವೆ ಶಾಂತಿ ಮತ್ತು ಪ್ರೀತಿಯ ಹುಡುಕಾಟಕ್ಕೆ ಕಾರಣವಾಯಿತು. ಗೋರಖ್ಪುರ್ವನ್ನು ತೊರೆದು, ನಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದೆವು ಎಂದು ಹೇಳಿದ್ದರು.
ಸದ್ಯ ಮದುವೆಯಾಗಿರುವ ಇವರಿಬ್ಬರು, ಮನೆಯೊಂದನ್ನು ಬಾಡಿಗೆಗೆ ಪಡೆದು, ವಿವಾಹಿತ ಜೋಡಿಯಂತೆ ಒಟ್ಟಿಗೆ ಬಾಳುವ ಗುರಿಯನ್ನು ಹೊಂದಿದ್ದಾರೆ.
ದೇವಸ್ಥಾನದ ಅರ್ಚಕ ಉಮಾಶಂಕರ್ ಪಾಂಡೆ ಮಾತನಾಡಿ, ಮಹಿಳೆಯರು ಹೂಮಾಲೆ ಮತ್ತು ಸಿಂಧೂರವನ್ನು ಖರೀದಿಸಿದರು. ಬಳಿಕ ಸದ್ದಿಲ್ಲದೆ, ಧಾರ್ಮಿಕ ವಿಧಾನಗಳನ್ನು ಅನುಸರಿಸಿ, ವಿವಾಹವಾಗಿ ಹೊರಹೋದರು ಎಂದು ಹೇಳಿದ್ದಾರೆ.
Advertisement