
ಚೆನ್ನೈ: ಮುಂದಿನ 15 ವರ್ಷಗಳಲ್ಲಿ ವಿಶ್ವಗುರು ಸ್ಥಾನಮಾನ ಸಾಧಿಸಲು ಭಾರತವು ಆರ್ಥಿಕ, ವಿದೇಶಿ ಮತ್ತು ಸೇನಾ ನೀತಿಗಳಲ್ಲಿ ಬದಲಾವಣೆಗಳನ್ನು ತರಬೇಕೆಂದು ಆರ್ಥಿಕ ತಜ್ಞ ಮತ್ತು ಚಿಂತಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.
ಚೆನ್ನೈನ ThinkEdu Conclave ನಲ್ಲಿ 'ವಿಶ್ವಗುರು ಅಥವಾ ವಿಶ್ವಬಂಧು: ಭಾರತಕ್ಕೆ ಸರಿಯಾದ ಮಾರ್ಗ' ಎಂಬ ವಿಷಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಸಂವಾದದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮಾತನಾಡಿದರು. ಈ ವೇಳೆ ವಿಶ್ವಗುರು ಹಾಗೂ ವಿಶ್ವಬಂಧು ನಡುವಿನ ವ್ಯತ್ಯಾಸವನ್ನು ವಿವರಿಸಿದರು.
ವಿಶ್ವಗುರು ಸಾಕಷ್ಟು ವಿದ್ಯಾವಂತ ಮತ್ತು ಇತರ ದೇಶಗಳೊಂದಿಗೆ ತನ್ನ ಜ್ಞಾನವನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರವನ್ನು ಉಲ್ಲೇಖಿಸಿದರೆ, ವಿಶ್ವಬಂಧು ವಿವಿಧ ರಾಷ್ಟ್ರಗಳ ಜನರಿಗೆ ಸ್ನೇಹಿತನಾಗಿರುವ ವ್ಯಕ್ತಿತ್ವವ ನ್ನು ಉಲ್ಲೇಖಿಸುತ್ತದೆ ಎಂದು ಹೇಳಿದರು.
ಯೋಗ ಮತ್ತು ಆಧುನಿಕ ಎಂಜಿನಿಯರಿಂಗ್‌ಗೆ ಕೊಡುಗೆಗಳಂತಹ ಕೆಲವು ಕ್ಷೇತ್ರಗಳಲ್ಲಿ ಭಾರತವು ಈಗಾಗಲೇ ವಿಶ್ವಗುರು ಸ್ಥಾನಮಾನವನ್ನು ಸಾಧಿಸಿದೆ, ಈ ಕ್ಷೇತ್ರಗಳಲ್ಲಿ ಭಾರತೀಯರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಆದಾಗ್ಯೂ, ದೇಶವು ಅನೇಕ ಅಂಶಗಳಲ್ಲಿ ಆರ್ಥಿಕವಾಗಿ ಅಸಮತೋಲನವನ್ನು ಹೊಂದಿದ್ದು, ಹಲವಾರು ಕ್ಷೇತ್ರಗಳಲ್ಲಿ ಆಮದುಗಳನ್ನು ಅವಲಂಬಿಸಿದೆ.
ಸೇನಾ ಶಕ್ತಿಯಿಲ್ಲದೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ಸರ್ಕಾರವು 4,064 ಚ.ಕಿ.ಮೀ ಭಾರತೀಯ ಭೂಪ್ರದೇಶವನ್ನು ಕಳೆದುಕೊಂಡಿದ್ದು, ಈ ಸಂಬಂಧ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆರೋಪಿಸಿದರು.
ಬಳಿಕ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, ಮೋದಿ ಸರ್ಕಾರ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸದಂತಹ ಅವಮಾನವನ್ನು ಎದುರಿಸಿದ ಉದಾಹರಣೆ ನೀಡಿದರು.
ವಿಶ್ವಗುರು ಸ್ಥಾನಮಾನ ಸಾಧಿಸಬೇಕೆಂದರೆ ಭಾಷೆ ಮತ್ತು ಜಾತಿಯಂತಹ ಸಮಸ್ಯೆಗಳನ್ನು ನಿವಾರಿಸಬೇಕು. ಸಮಾಜದಲ್ಲಿ ಏಕತೆಯ ಅಗತ್ಯವಿದೆ. ಭಾರತವು ಮೂರನೇ ಅತಿದೊಡ್ಡ ಜಿಡಿಪಿ ಮತ್ತು ಭಾರತೀಯರ ಜಾಗತಿಕ ಸಾಧನೆಗಳೊಂದಿಗೆ ಸಾಮರ್ಥ್ಯವನ್ನು ಹೊಂದಿದ್ದರೂ, ದೇಶವು ಇನ್ನೂ ವಿಶ್ವಗುರುವಾಗಿಲ್ಲ. ಆದರೆ, ಬದಲಾವಣೆಗಳ ಮೂಲಕ 2040 ರ ವೇಳೆಗೆ ಈ ಸ್ಥಾನಮಾನವನ್ನು ಪಡೆಯಬಹುದು ಎಂದು ಹೇಳಿದರು.
ಭಾರತದ ಆರ್ಥಿಕ ಬೆಳವಣಿಗೆ ಕುರಿತು ಮಾತನಾಡ, ನರಸಿಂಹ ರಾವ್ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ಸುಧಾರಣೆಗಳನ್ನು ಶ್ಲಾಘಿಸಿದರು. ಇದು GDP ಬೆಳವಣಿಗೆಯನ್ನು ಶೇ.7-8 ಹೆಚ್ಟಿಸಿತು ಎಂದು ತಿಳಿಸಿದರು.
ಮೋದಿ ಸರ್ಕಾರದಲ್ಲಿ, ಕಳೆದ ಎರಡು ವರ್ಷಗಳಲ್ಲಿ ಜಿಡಿಪಿ ದರವು ಕುಸಿಯಲು ಪ್ರಾರಂಭಿಸಿದೆ. 4-4.5 ಪ್ರತಿಶತದ ನಡುವೆ ಇದ್ದು, ಇದು ತುಂಬಾ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಮುಂತಾದ ಭರವಸೆಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸುತ್ತಿರುವ ಬಗ್ಗೆ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಮಮಂದಿರ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡುವಂತೆ ಮೋದಿ ಸರ್ಕಾರ ಅರ್ಜಿ ಸಲ್ಲಿಸಿದ್ದು, ಅದರ ವಿರುದ್ಧ ಹೋರಾಟ ಮಾಡಿದೆ. ಆರ್ಟಿಕಲ್ 370 ಕ್ಕೆ ಸಂಬಂಧಿಸಿದಂತೆ, ನಿರ್ಧಾರ ತೆಗೆದುಕೊಳ್ಳಲು ನಾವು ಅವರನ್ನು ಒತ್ತಾಯಿಸಬೇಕಾಯಿತು ಎಂದು ತಿಳಿಸಿದರು.
ಬಳಿಕ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಅವರು, ಪಕ್ಷವು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಅಡಿಯಲ್ಲಿ "ಕುಟುಂಬ ಪಕ್ಷ"ವಾಗಿ ಕಾರ್ಯನಿರ್ವಹಿಸುತ್ತಿದೆ, ಮೋದಿ ಸರ್ಕಾರವು ರಾಹುಲ್ ಗಾಂಧಿಯ ಪೌರತ್ವವನ್ನು ಪ್ರಕರಣದಲ್ಲಿ ಅವರನ್ನು ರಕ್ಷಣೆ ಮಾಡಿದೆ ಎಂದು ಆರೋಪಿಸಿದರು.
Advertisement