
ಕೋಲ್ಕತಾ: ಪಶ್ಚಿಮ ಬಂಗಾಳದ ಪ್ರತಿಷ್ಠಿತ ಕಾಲೇಜೊಂದರ ಮಹಿಳಾ ಪ್ರೊಫೆಸರ್ ವೊಬ್ಬರು ವಿದ್ಯಾರ್ಥಿಯನ್ನು ವಿವಾಹದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಸರ್ಕಾರ, ತನಿಖೆಗೆ ಆದೇಶಿಸಿದೆ.
ನಾಡಿಯಾದ ಹರಿಂಗಟದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ವಿಶ್ವವಿದ್ಯಾನಿಲಯದ (MAKAUT) ಪ್ರೊಫೆಸರ್ ಮತ್ತು ಮೊದಲ ವರ್ಷದ ವಿದ್ಯಾರ್ಥಿ ಹಾರ ವಿನಿಮಯ ಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿ ಶಿಕ್ಷಕಿಯ ಹಣೆಗೆ ತಿಲಕ ಇಡುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ತರಗತಿ ನಡೆಯುತ್ತಿರುವಾಗ, ಈ ಪ್ರೊಫೆಸರ್ ಮತ್ತು ವಿದ್ಯಾರ್ಥಿ ಸಾಂಕೀತಿಕವಾಗಿ ‘ಮದುವೆ’ಯಾದರು. ಸಾಂಪ್ರದಾಯಿಕ ಪದ್ಧತಿಗಳು ಮತ್ತು ವಿಧಿವಿಧಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಈ ಅಣಕು ಮದುವೆಯನ್ನು ಪ್ರೊಫೆಸರ್ ಏರ್ಪಡಿಸಿದ್ದರು ಎಂಬುದಾಗಿ ವರದಿಯಾಗಿದೆ. ಆದರೆ, ಈ ‘ಮದುವೆ’ಯ ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ ಮತ್ತು ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ.
ಘಟನೆಯು ವಿವಾದವಾಗುತ್ತಿರುವಂತೆಯೇ, ಎಚ್ಚೆತ್ತುಕೊಂಡ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಅಲ್ಲದೆ, ಪ್ರಾಧ್ಯಾಪಕಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರಾಧಾಪಕಿ, ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಅಣಕು ಪ್ರದರ್ಶನ ಮಾಡಲಾಗಿತ್ತು. ಫ್ರೆಶರ್ಸ್ ಪಾರ್ಟಿಗಾಗಿ ನಾಟಕ ಮಾಡಿದ್ದೆವು, ನನ್ನ ವಿರುದ್ಧ ಷಡ್ಯಂತ್ರ ನಡೆಸವಾಗಿದ್ದು, ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ. ಮಾನಹಾನಿ ಮಾಡಲು ಯತ್ನಿಸಿದವರ ವಿರುದ್ಧ ದೂರು ದಾಖಲಿಸುತ್ತೇನೆಂದು ಹೇಳಿದ್ದಾರೆ.
ವಿಶ್ವವಿದ್ಯಾಲಯದ ಉಪಕುಲಪತಿ ತಪಸ್ ಚಕ್ರವರ್ತಿ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ. ಇದು ಸಂಪೂರ್ಣ ಶೈಕ್ಷಣಿಕ ಯೋಜನೆಯಾಗಿತ್ತು. ಆದರೆ, ವಿವಾದ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ತನಿಖೆಗೆ ಸಮಿತಿ ರಚಿಸಲಾಗಿದೆ. ಸಮಿತಿಯು ವರದಿ ಸಲ್ಲಿಸುವವರೆಗೆ ಸದ್ಯಕ್ಕೆ ಪ್ರಧ್ಯಾಪಕಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement