
ಝಾನ್ಸಿ: ಉತ್ತರ ಪ್ರದೇಶದಲ್ಲಿ ಅಕ್ರಮ ಸಂಬಂಧಕ್ಕೆ ಮತ್ತೊಂದು ಬಲಿಯಾಗಿದ್ದು, ಸತ್ತ ಪತಿಯ ಇಬ್ಬರು ಸಹೋದರರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಅವರ ತಾಯಿಯನ್ನು ಕೂಡ ಕೊಂದಿರುವ ವಿದ್ರಾವಕ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ವರದಿಯಾಗಿದ್ದು, 54 ವರ್ಷದ ಸುಶೀಲಾ ದೇವಿಯ ಹತ್ಯೆಯ ಹಿಂದಿನ ಪಿತೂರಿಯನ್ನು ಪೊಲೀಸರು ಬಯಲು ಮಾಡಿದ್ದಾರೆ. ತನಿಖೆಯ ಪರಿಣಾಮವಾಗಿ ಆಕೆಯ ಕಿರಿಯ ಸೊಸೆ ಪೂಜಾ ಮತ್ತು ಪೂಜಾಳ ಸಹೋದರಿ ಕಮಲಾಳ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆ ಬಳಿಕ ಪರಾರಿಯಲ್ಲಿದ್ದ ಕಮಲಾಳ ಪ್ರಿಯಕರ ಅನಿಲ್ ವರ್ಮಾನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೂವರು ಕೊಲೆಗೆ ಸಂಚು ರೂಪಿಸಿ ಸಂತ್ರಸ್ಥೆ ಸುಶೀಲಾ ದೇವಿಯ ಮನೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಕದ್ದ ಆಭರಣಗಳನ್ನು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಅನಿಲ್ ವರ್ಮಾ ನನ್ನು ಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಆರೋಪಿ ಅನಿಲ್ ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಕೂಡ ಪ್ರತಿದಾಳಿ ನಡೆಸಿದಾಗ ಆತ ಗಾಯಗೊಂಡ ಮತ್ತು ನಂತರ ಸಶಸ್ತ್ರ ಭದ್ರತೆಯೊಂದಿಗೆ ಆತನನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ
ಇನ್ನು ಪೊಲೀಸರ ಪ್ರಕಾರ, ಪಿತ್ರಾರ್ಜಿತ ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ದೀರ್ಘಕಾಲದ ಕೌಟುಂಬಿಕ ಕಲಹವಿತ್ತು. ಪತಿಯ ಮರಣದ ನಂತರ ಆರೋಪಿ ಪೂಜಾ ಪತಿಯ ಸೋದರ ಮಾವ ಕಲ್ಯಾಣ್ ಸಿಂಗ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಅವರ ಮರಣದ ನಂತರ, ಪೂಜಾ ಅವರನ್ನು ಅವರ ಮಾವ ಅಜಯ್ ಸಿಂಗ್ ಮತ್ತು ಸೋದರ ಮಾವ ಸಂತೋಷ್ ಅವರು ಕುಮ್ಹರಿಯಾದಲ್ಲಿರುವ ತಮ್ಮ ಪೂರ್ವಜರ ಮನೆಗೆ ಕರೆದೊಯ್ದಿದ್ದರು.
ಅಲ್ಲಿ, ಅವಳು ತನ್ನ ಸೋದರ ಮಾವ ಸಂತೋಷ್ ಜೊತೆ ಸಂಬಂಧ ಬೆಳೆಸಿದಳು ಎಂದು ವರದಿಯಾಗಿದೆ. ಆದಕೆ ಅವನಿಗೆ ಈಗಾಗಲೇ ವಿವಾಹವಾಗಿತ್ತು. ಈ ಸಂಬಂಧವು ಅಂತಿಮವಾಗಿ ಒಂದು ಹೆಣ್ಣು ಮಗುವಿನ ಜನನಕ್ಕೆ ಕಾರಣವಾಯಿತು. ಸಂತೋಷ್ ನ ಕಾನೂನುಬದ್ಧ ಪತ್ನಿ ರಾಗಿಣಿ ಈ ಸಂಬಂಧವನ್ನು ವಿರೋಧಿಸಿ ಒಂಬತ್ತು ತಿಂಗಳ ಹಿಂದೆ ತನ್ನ ತಾಯಿಯ ಮನೆಗೆ ತೆರಳಿದಳು. ಇಬ್ಬರು ಸೋದರ ಮಾವಂದಿರ ಸಾವಿನ ತನಿಖೆಯನ್ನು ಪೊಲೀಸರು ಮತ್ತೆ ಆರಂಭಿಸುತ್ತಿದ್ದಾರೆ.
ಭೂಮಿ ವಿಚಾರಕ್ಕೆ ಗಲಾಟೆ ತೆಗೆಯುತ್ತಿದ್ದ ಪೂಜಾ
ಇನ್ನು ಪೂಜಾ ಮನೆಯ ನಿರ್ಧಾರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಳು. ಕೃಷಿ ಭೂಮಿಯನ್ನು ಮಾರಾಟ ಮಾಡುವ ವಿಚಾರವಾಗಿ ತಗಾದೆ ತೆಗೆದಿದ್ದಳು. ಕುಟುಂಬವು ಸರಿಸುಮಾರು 6.5 ಎಕರೆ ಭೂಮಿಯನ್ನು ಹೊಂದಿತ್ತು. ಪೂಜಾ ಗ್ವಾಲಿಯರ್‌ಗೆ ತೆರಳಲು ತನ್ನ ಪಾಲನ್ನು ಮಾರಾಟ ಮಾಡಲು ಒತ್ತಾಯಿಸಿದಳು. ಸಂತೋಷ್ ಮತ್ತು ಅಜಯ್ ಒಪ್ಪಿಕೊಂಡಿದ್ದಾರೆಂದು ವರದಿಯಾಗಿದ್ದರೂ, ಸುಶೀಲಾ ದೇವಿ ವಿರೋಧಿಸಿದರು. ಇದೇ ಕಾರಣಕ್ಕೆ ಪೂಜಾ ತನ್ನ ಅತ್ತೆ ಸುಶೀಲಾ ದೇವಿಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅದರಂತೆ ಅನಿಲ್ ವರ್ಮಾ ಜೊತೆ ಸೇರಿ ಪೂಜಾ ಅತ್ತೆ ಸುಶೀಲಾರನ್ನು ಕೊಲೆಗೈದಿದ್ದು, ಕೊಲೆ ಬಳಿಕ ಆಕೆಯ ಮನೆಯಲ್ಲಿದ್ದ ಸುಮಾರು 8 ಲಕ್ಷ ರೂಪಾಯಿ ಚಿನ್ನಾಭರಣಗಳು ಮತ್ತು ಹಣವನ್ನು ದೋಚಿ ಅದನ್ನು ಕಳ್ಳತನ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಳು.
Advertisement