
ನವದೆಹಲಿ: ಟ್ಯಾಕ್ಸಿ ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಉತ್ತರಾಖಂಡದ ದಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಟ್ಯಾಕ್ಸಿ ವಾಹನಗಳನ್ನು ನೇಪಾಳದ ಗಡಿಯಲ್ಲಿ ಮಾರಾಟ ಮಾಡುತ್ತಾ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ 49 ವರ್ಷದ ಟ್ಯಾಕ್ಸಿ ಕಿಲ್ಲರ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಆರೋಪಿ ಅಜಯ್ ಲಂಬಾ ಅಲಿಯಾಸ್ ಬನ್ಶಿ ದೆಹಲಿ ಮತ್ತು ಉತ್ತರಾಖಂಡ್ ನಾದ್ಯಂತ ನಾಲ್ಕು ಕ್ರೂರ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ರಾಷ್ಟ್ರ ರಾಜಧಾನಿಯ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ 2001ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳಲ್ಲಿ ಆತನನ್ನು ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1999 ಮತ್ತು 2001 ರ ನಡುವೆ ನಡೆದ ಘೋರ ಅಪರಾಧಗಳ ಹಿಂದೆ ಲಂಬಾ ಮಾಸ್ಟರ್‌ಮೈಂಡ್ ಆಗಿದ್ದು, ಆತ ತನ್ನ ಸಹಚರರೊಂದಿಗೆ ಟ್ಯಾಕ್ಸಿ ಚಾಲಕರನ್ನು ಕೊಂದು, ಟ್ಯಾಕ್ಸಿಗಳನ್ನು ಲೂಟಿ ಮಾಡಿ ಉತ್ತರಾಖಂಡದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಶವಗಳನ್ನು ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ವಿರುದ್ಧ ದೆಹಲಿಯಲ್ಲಿ ನಾಲ್ಕು ದರೋಡೆ, ಕೊಲೆ ಪ್ರಕರಣ ದಾಖಲಾಗಿದ್ದು, ಅಪರಾಧಿ ಎಂದು ಘೋಷಿಸಲಾಗಿದೆ. ಕೆಲಕಾಲ 2008 ರಿಂದ 2018 ರವರೆಗೆ ತಮ್ಮ ಕುಟುಂಬದೊಂದಿಗೆ ನೇಪಾಳದಲ್ಲಿ ವಾಸಿಸುತ್ತಿದ್ದ ಆರೋಪಿ ತದನಂತರ ಡೆಹ್ರಾಡೂನ್‌ಗೆ ತೆರಳಿದ್ದ. 2020 ರಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಹಂತಕ, ಒಡಿಶಾದಿಂದ ದೆಹಲಿ ಮತ್ತು ಭಾರತದ ಇತರ ಭಾಗಗಳಿಗೆ ಗಾಂಜಾ ಸರಬರಾಜು ಜಾಲದಲ್ಲಿ ಕೆಲಸ ಮಾಡುತ್ತಿದ್ದ ಎಂಡಿ ಡಿಸಿಪಿ ದಿಲೀಪ್ ನೇಗಿ ತಿಳಿಸಿದ್ದಾರೆ.
2021 ರಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಆತನನ್ನು ಬಂಧಿಸಲಾಗಿತ್ತು. 2024 ರಲ್ಲಿ ಒಡಿಶಾದ ಬೆರ್ಹಾಂಪುರದಲ್ಲಿ ಆಭರಣ ಅಂಗಡಿಯ ಡಕಾಯಿತಿಗೆ ಸಂಬಂಧಿಸಿದಂತೆ ಮತ್ತೆ ಆತನನ್ನು ಬಂಧಿಸಲಾಗಿತ್ತು. ತದನಂತರ ಆತ ಎರಡು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರ ನೀಡಿದರು.
Advertisement