
ಅಮರಾವತಿ: ಮಾವಿನ ಹಣ್ಣುಗಳನ್ನು ತುಂಬಿದ್ದ ಟ್ರಕ್'ವೊಂದು ಪಲ್ಟಿಯಾಗಿ ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಡಪ ಪಟ್ಟಣದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಪುಲ್ಲಂಪೇಟೆ ಮಂಡಲದ ರೆಡ್ಡಿ ಚೆರುವು ಕಟ್ಟಾದಲ್ಲಿ ಅಪಘಾತ ಸಂಭವಿಸಿದೆ.
ಲಾರಿ ಉರುಳಿ ಬೀಳುತ್ತಿದ್ದಂತೆಯೇ ಲೋಡಿನ ಮೇಲೆ ಕುಳಿತಿದ್ದ ಕಾರ್ಮಿಕರು ಕೆಳಗೆ ಸಿಲುಕಿಕೊಂಡಿದ್ದಾರೆ. ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಸೇರಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ರಾಜಂಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು ಗಜ್ಜಲ ದುರ್ಗಯ್ಯ (32), ಗಜ್ಜಲ ಲಕ್ಷ್ಮಿ ದೇವಿ (36), ಗಜ್ಜಲ ರಮಣ (42), ಗಜ್ಜಲ ಶ್ರೀನು (32), ರಾಧಾ (39), ವೆಂಕಟ ಸುಬ್ಬಮ್ಮ (37), ಚಿಟ್ಟೆಮ್ಮ (25) ಸುಬ್ಬ ರತ್ನಮ್ಮ (45) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ಮುನಿಚಂದ್ರ (38) ರಾಜಂಪೇಟೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ದುರ್ಘಟನೆಗೆ ಆಂಧ್ರಪ್ರದೇಶ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Advertisement