
ಗುವಾಹಟಿ: ಭಾರತದ ಆತಂಕದ ನಡುವೆ ಆಗ್ನೇಯ ಟಿಬೆಟ್‌ನ ನ್ಯಿಂಗ್‌ಚಿ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಯ ಟಿಬಿಟಿಯನ್ ಹೆಸರಾದ ಯಾರ್ಲುಂಗ್ ತ್ಸಾಂಗ್ಪೊ ನದಿಯ ಮೇಲೆ ವಿಶ್ವದ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟು ನಿರ್ಮಾಣವನ್ನು ಚೀನಾ ಆರಂಭಿಸಿದೆ.
ಶನಿವಾರ ನಡೆದ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭದಲ್ಲಿ ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ಭಾಗವಹಿಸಿದ್ದರು ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಬಹು-ಶತಕೋಟಿ ಡಾಲರ್ ಯೋಜನೆಯನ್ನು ಚೀನಾ 2023ರಲ್ಲಿ ಅನುಮೋದಿಸಿತ್ತು.
ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆ ಎಂದು ಹೇಳಲಾಗುತ್ತಿರುವ ಈ ಯೋಜನೆಯಿಂದ ಚೀನಾ 60, 000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಸಿಯಾಂಗ್ ಆಗಿ ಅರುಣಾಚಲ ಪ್ರದೇಶ ಪ್ರವೇಶಿಸುವ ಯಾರ್ಲುಂಗ್ ತ್ಸಾಂಗ್ಪೋ ನದಿ ಅಸ್ಸಾಂನಲ್ಲಿ ಬ್ರಹ್ಮಪುತ್ರವಾಗಿ ಬಾಂಗ್ಲಾದೇಶಕ್ಕೆ ಹರಿಯುತ್ತದೆ.
ಚೀನಾದ ಯೋಜನೆಯಿಂದ ಬ್ರಹ್ಮಪುತ್ರಾ ನದಿಗೆ ಕಂಟಕವಾಗಬಹುದು ಎಂಬ ಆತಂಕದ ನಡುವೆ ಅರುಣಾಚಲದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಯೋಜನೆ ಕುರಿತು ವ್ಯತಿರಿಕ್ತ ಅಭಿಪ್ರಾಯವನ್ನು ಇತ್ತೀಚಿಗೆ ಹಂಚಿಕೊಂಡಿದ್ದರು.
ಚೀನಾದಿಂದ 'ವಾಟರ್ ಬಾಂಬ್': ಚೀನಾದ ಯೋಜನೆಯನ್ನು 'ವಾಟರ್ ಬಾಂಬ್' ಎಂದು ಬಣ್ಣಿಸಿರುವ ಖಂಡು, ಅರುಣಾಚಲ ರಾಜ್ಯದ ಜನರಿಗೆ ಮತ್ತು ಅವರ ಜೀವನೋಪಾಯಕ್ಕೆ ಅಸ್ತಿತ್ವದ ಬೆದರಿಕೆಯಾಗಿದೆ. ಅಂತಾರಾಷ್ಟ್ರೀಯ ಜಲ ಒಪ್ಪಂದಕ್ಕೆ ಚೀನಾ ಸಹಿ ಹಾಕದ ಕಾರಣ ಅಣೆಕಟ್ಟು ತೀವ್ರ ಕಳವಳಕಾರಿಯಾಗಿದೆ ಮತ್ತು ದೇಶವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾ ಏನು ಮಾಡಬಹುದೆಂದು ಯಾರಿಗೂ ತಿಳಿದಿಲ್ಲ. ಇದನ್ನು ಒಂದು ರೀತಿಯ ನೀರಿನ ಬಾಂಬ್ ಆಗಿ ಇದನ್ನು ಬಳಸಬಹುದು. ಒಂದು ವೇಳೆ ಅಣೆಕಟ್ಟನ್ನು ನಿರ್ಮಿಸಿ ಇದ್ದಕ್ಕಿದ್ದಂತೆ ನೀರನ್ನು ಬಿಡುಗಡೆ ಮಾಡಿದರೆ, ನಮ್ಮ ಸಂಪೂರ್ಣ ಸಿಯಾಂಗ್ ಬೆಲ್ಟ್ ನಾಶವಾಗುತ್ತದೆ ಎಂದು ಖಂಡು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾದ ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರದೊಂದಿಗೆ ಅರುಣಾಚಲ ಸರ್ಕಾರ ಸಮಾಲೋಚಿಸಿ ಸಿಯಾಂಗ್ ವಿವಿಧೋದ್ದೇಶ ಯೋಜನೆಯನ್ನು ರಕ್ಷಣಾ ಕಾರ್ಯ ವಿಧಾನವಾಗಿ ಮತ್ತು ನೀರಿನ ಭದ್ರತೆಗೆ ನಿರ್ಣಾಯಕವಾಗಿ ಮಾಡಲಾಗಿದೆ ಎಂದು ಹೇಳಿದರು.
ಲಘುವಾಗಿ ತೆಗೆದುಕೊಂಡ ಅಸ್ಸಾಂ ಮುಖ್ಯಮಂತ್ರಿ: ಸಿಯಾಂಗ್ ಮತ್ತು ಬ್ರಹ್ಮಪುತ್ರ ನದಿಗಳನ್ನು ಬತ್ತಿಸುವ ಚೀನಾದ ಸಂಭವನೀಯ ಪ್ರಯತ್ನಗಳ ಬಗ್ಗೆ ಖಂಡು ಆತಂಕ ವ್ಯಕ್ತಪಡಿಸಿದ್ದರೂ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅದನ್ನು ಲಘುವಾಗಿ ತೆಗೆದುಕೊಂಡಿದ್ದಾರೆ.
ಬ್ರಹ್ಮಪುತ್ರದ ಒಟ್ಟು ಹರಿವಿನಲ್ಲಿ ಚೀನಾದ ಕೊಡುಗೆ ಶೇ. 30 ರಿಂದ 35 ರಷ್ಟು ಮಾತ್ರ. ಉಳಿದದ್ದು ಹಿಮ ಕರಗುವಿಕೆ ಮತ್ತು ಟಿಬೆಟಿಯನ್ ಪ್ರದೇಶದ ಮಳೆ ಮೂಲಕ ಬರುತ್ತದೆ. ಉಳಿದ ಶೇ. 65 ರಿಂದ 70 ರಷ್ಟು ಭಾರತದೊಳಗೆ ಬರುತ್ತದೆ. ಅರುಣಾಚಲ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಧಾರಾಕಾರ ಮಾನ್ಸೂನ್ ಮಳೆಯಿಂದ ಪ್ರಮುಖ ಉಪನದಿಗಳಾದ ಸುಬಾನ್ಸಿರಿ, ಲೋಹಿತ್, ಕಮೆಂಗ್, ಮಾನಸ್, ಧನಸಿರಿ, ಜಿಯಾ-ಭರಾಲಿ, ಕೊಪಿಲಿ, ಖಾಸಿ, ಗರೋ, ಮತ್ತು ದಿಗಾ ನದಿಯ ಮೂಲಕ ಒಳ ಹರಿವು ಹೆಚ್ಚಾಗುತ್ತದೆ ಎಂದು ಶರ್ಮಾ ಜೂನ್ 2 ರಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದರು.
ಬ್ರಹ್ಮಪುತ್ರ ಮಳೆ-ಆಧಾರಿತ ಭಾರತೀಯ ನದಿ ವ್ಯವಸ್ಥೆಯಾಗಿದ್ದು, ಭಾರತೀಯ ಪ್ರದೇಶವನ್ನು ಪ್ರವೇಶಿಸಿದ ನಂತರ ಮತ್ತಷ್ಟು ಹೆಚ್ಚಾಗಿ ಹರಿಯುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದರು.
Advertisement