
ನವದೆಹಲಿ: ಸುಮಾರು 16 ವರ್ಷಗಳ ನಂತರ ಬಹು ನಿರೀಕ್ಷಿತ ಭಾರತದ 16ನೇ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಲಡಾಖ್‌ನಂತಹ ಹಿಮದಿಂದ ಆವೃತ ಪ್ರದೇಶಗಳಲ್ಲಿ ಅಕ್ಟೋಬರ್ 1, 2026 ಮತ್ತು ದೇಶದ ಉಳಿದ ಭಾಗಗಳಲ್ಲಿ ಮಾರ್ಚ್ 1, 2027 ರಂದು ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2011ರ ನಂತರ ನಡೆಯುತ್ತಿರುವ ಭಾರತದ ಮೊದಲ ಜನಗಣತಿಯನ್ನು ಕ್ರಮವಾಗಿ ಅಕ್ಟೋಬರ್ 1, 2026 ಮತ್ತು ಮಾರ್ಚ್ 1, 2027 ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಮೊದಲ ಹಂತದಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಹಿಮದಿಂದ ಆವೃತವಲ್ಲದ ಸಿಂಕ್ರೊನಸ್ ಅಲ್ಲದ ಪ್ರದೇಶಗಳಲ್ಲಿ ಸರ್ವೇ ನಡೆಯಲಿದ್ದು, ಈ ಪ್ರದೇಶಗಳಿಗೆ ಸಂಬಂಧಿಸಿದಂತೆ, ಉಲ್ಲೇಖ ದಿನಾಂಕವು ಅಕ್ಟೋಬರ್ 1, 2026 ರ 00:00 ಗಂಟೆಗಳಾಗಿರಬೇಕು ಎಂದು ಪ್ರಕಟಣೆ ಹೇಳಿದೆ.
ಇತರ ರಾಜ್ಯಗಳಲ್ಲಿ ಈ ಜನಗಣತಿಯ ಉಲ್ಲೇಖ ದಿನಾಂಕವು ಮಾರ್ಚ್ 1, 2027 ರ 00.00 ಗಂಟೆ ಆಗಿರಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮನೆಪಟ್ಟಿ ಕಾರ್ಯಾಚರಣೆ(HLO) ಎಂದೂ ಕರೆಯಲ್ಪಡುವ ಮೊದಲ ಹಂತದಲ್ಲಿ, ಆಸ್ತಿಗಳು, ಕುಟುಂಬದ ಆದಾಯ, ವಸತಿ ಪರಿಸ್ಥಿತಿಗಳು ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಮುಂಬರುವ ಜನಗಣತಿಯು ಭಾರತದ ಮೊದಲ ಡಿಜಿಟಲ್ ಜನಗಣತಿಯಾಗಿರುವುದರಿಂದ, ಮೊದಲ ಬಾರಿಗೆ ಪ್ರತಿಕ್ರಿಯಿಸುವವರು ಮನೆಯಿಂದಲೇ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ.
ಎರಡನೇ ಹಂತವಾದ ಜನಸಂಖ್ಯಾ ಗಣತಿ (PE), ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಜನಸಂಖ್ಯಾ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮೊದಲ ಬಾರಿಗೆ, ಜಾತಿ ಗಣತಿಯು ಜನಗಣತಿ ಆಯಾಮದ ಭಾಗವಾಗಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಕೇಂದ್ರ ಗೃಹ ಕಾರ್ಯದರ್ಶಿ, ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಜನಗಣತಿಯ ಸಿದ್ಧತೆಗಳನ್ನು ಪರಿಶೀಲಿಸಿದರು.
Advertisement