
ರಾಂಪುರ: ತನ್ನ ಅಪ್ರಾಪ್ತ ಪುತ್ರನ ಮದುವೆಗಾಗಿ ನೋಡಿದ್ದ ಯುವತಿಯೊಂದಿಗೆ 6 ಮಕ್ಕಳ ತಂದೆ ಪರಾರಿಯಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿ ಪುತ್ರನ ಮದುವೆಗಾಗಿ ನೋಡಿದ್ದ ಯುವತಿಯೊಂದಿಗೆ ಆತನ ತಂದೆಯೇ ಪರಾರಿಯಾಗಿದ್ದು, ಇದನ್ನು ಪ್ರಶ್ನಿಸಿದ ಪತ್ನಿಗೂ ಥಳಿಸಿದ್ದಾನೆ. ಈ ಸುದ್ದಿ ಇದೀಗ ಉತ್ತರ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ತಂದೆಯ ಕಳ್ಳಾಟ ಗೊತ್ತಿದ್ದರೂ ಪುತ್ರ ಮತ್ತು ಆತನ ಕುಟುಂಬಸ್ಥರು ಸುಮ್ಮನಿದ್ದರು ಎಂದು ಹೇಳಲಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಉತ್ತರ ಪ್ರದೇಶದ ರಾಂಪುರದಲ್ಲಿ ಶಕೀಲ್ ಮತ್ತು ಶಬಾನಾ ದಂಪತಿಗೆ 6 ಜನ ಮಕ್ಕಳು. ಶಕೀಲ್ ತನ್ನ 115 ವರ್ಷದ ಅಪ್ರಾಪ್ತ ಮಗನಿಗೆ ಮದುವೆ ಮಾಡಲು ನಿರ್ಧರಿಸಿದ್ದ. ಅದರಂತೆ ಮದುವೆಗೆ ವಧು ಹುಡುಕುತ್ತಿದ್ದ. ಈ ವೇಳೆ ಸ್ನೇಹಿತರ ನೆರವಿನಿಂದ ಓರ್ವ ಯುವತಿಯನ್ನು ಹುಡುಕಲಾಗಿತ್ತು. ಅದರಂತೆ ಯುವತಿ ಮನೆಗೆ ಹುಡುಗಿ ನೋಡಲು ಶಕೀಲ್ ಕುಟುಂಬ ಸಮೇತರಾಗಿ ಹೋಗಿದ್ದ. ಇದೇ ಸಂದರ್ಭದಲ್ಲಿ ಶಕೀಲ್ ಗೆ ಯುವತಿ ಮೇಲೆ ಪ್ರೇಮ ಅಂಕುರಿಸಿದೆ. ಅಂದಿನಿಂದ ಶಕೀಲ್ ಆಕೆಯೊಂದಿಗೆ ನಿತ್ಯ ಮಾತನಾಡುತ್ತಿದ್ದ. ಗಂಟೆ ಗಟ್ಟಲೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಎಂದು ಶಕೀಲ್ ಪತ್ನಿ ಶಬಾನಾ ಹೇಳಿದ್ದಾರೆ.
ಅಕ್ರಮ ಸಂಬಂಧ ಇರುವ ಯುವತಿಯನ್ನೇ ಪುತ್ರನಿಗೆ ಮದುವೆ ಮಾಡಲು ಮುಂದಾಗಿದ್ದ ಶಕೀಲ್!
ಇನ್ನು ಪತ್ನಿ ಶಬಾನಾ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪುತ್ರನಿಗೆ ಮದುವೆ ಮಾಡುವುದು ಶಕೀಲ್ ನ ಒಂದು ನಾಟಕ ಅಷ್ಟೇ.. ಆತ ಮೊದಲಿನಿಂದಲೇ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಬಾನಾ ಅಳಲು ತೋಡಿಕೊಂಡಿದ್ದಾರೆ.
'ನನಗೆ ಮೊದಲಿನಿಂದಲೂ ಶಕೀಲ್ ಮೇಲೆ ಅನುಮಾನವಿತ್ತು. ಆತ ದಿನವಿಡೀ ಫೋನ್ ನಲ್ಲಿ ಮಾತನಾಡುತ್ತಿದ್ದ. ವಿಡಿಯೋ ಕರೆ ಮಾಡಿ ಗಂಟೆ ಗಟ್ಟಲೆ ಹರಟೆ ಹೊಡೆಯುತ್ತಿದ್ದ. ಈಗ್ಗೆ 2 ಬಾರಿ ಶಕೀಲ್ ನನ್ನ ಕೈಯಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದ. ಈ ಬಗ್ಗೆ ನಾನು ಆಕ್ಷೇಪಿಸಿದಾಗ ನನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಕುಟುಂಬಸ್ಥರಿಗೆ ಹೇಳಿದರೆ ಯಾರೂ ನಂಬುತ್ತಿರಲಿಲ್ಲ. ನಂತರ ನನ್ನ ಮಗನೊಂದಿಗೆ ಸೇರಿ ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಅವರ ಮಗ ತನ್ನ ಅಜ್ಜಿಯರಿಗೂ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿದಿತ್ತು. ಆದರೂ ಅವರು ಮದುವೆಗೆ ಒಪ್ಪಿಗೆ ನೀಡಿದರು ಎಂದು ಶಬಾನಾ ಹೇಳಿದ್ದಾರೆ.
ಹಣ, ಒಡವೆ ಕದ್ದು ಪರಾರಿ
ಬಳಿಕ ತನ್ನ ತಂದೆಯೊಂದಿಗೆ ಸಂಬಂಧ ಇರುವ ಮಹಿಳೆಯೊಂದಿಗೆ ನಾನು ವಿವಾಹವಾಗುವುದಿಲ್ಲ ಎಂದು 15 ವರ್ಷದ ಮಗ ಮದುವೆ ನಿರಾಕರಿಸಿದ. ಈ ಬೆಳವಣಿಗೆ ಬೆನ್ನಲ್ಲೇ ಶಕೀಲ್ ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಮತ್ತು ಸುಮಾರು 17 ಗ್ರಾಂ ಚಿನ್ನದೊಂದಿಗೆ ಶಕೀಲ್ ಪರಾರಿಯಾಗಿ ಆಕೆಯನ್ನು ವಿವಾಹವಾಗಿದ್ದಾನೆ ಎಂದು ಶಬಾನಾ ಹೇಳಿದ್ದಾರೆ.
ಇದೇ ಮೊದಲೇನಲ್ಲ..
ಇನ್ನು ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣ ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ ಏಪ್ರಿಲ್‌ನಲ್ಲಿ, ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದರು. ಅಲಿಗಢದ ವಧು ಶಿವಾನಿ ಅವರ ತಾಯಿ ಅನಿತಾ ಎಂಬಾಕೆ ತನ್ನಮಗಳು ಮದುವೆಯಾಗಬೇಕಿದ್ದ ಮಧುಮಗನ ಜೊತೆ ಪರಾರಿಯಾಗಿದ್ದರು. ಪರಾರಿಗೂ ಮೊದಲು ಆಕೆ ಮನೆಯಲ್ಲಿದ್ದ 3.5 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ, 5 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಹೋಗಿದ್ದರು.
ಈ ಕುರಿತು ಮಾತನಾಡಿದ್ದ ಪುತ್ರಿ ಶಿವಾನಿ, 'ನಾನು ಏಪ್ರಿಲ್ 16 ರಂದು ರಾಹುಲ್ ಅವರನ್ನು ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಅದಕ್ಕಿಂತ ಮೊದಲೇ ಅಂದರೆ ಏಪ್ರಿಲ್ 6 ರಂದು ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು" ಎಂದು ಹೇಳಿದ್ದರು.
ಶಿವಾನಿಯ ತಂದೆ ಜಿತೇಂದ್ರ ಕುಮಾರ್ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅನಿತಾ ತನ್ನ ಭಾವಿ ಅಳಿಯನೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದಾರೆಂದು ಕೇಳಿದ್ದೆ, ಆದರೆ ಮದುವೆ ಶೀಘ್ರದಲ್ಲೇ ನಡೆಯಲಿರುವುದರಿಂದ ಏನನ್ನೂ ಹೇಳದಿರಲು ನಿರ್ಧರಿಸಿದ್ದೆ ಎಂದು ಹೇಳಿದರು.
Advertisement