
ನವದೆಹಲಿ: ಟೆಂಪೋದಲ್ಲಿ ಮುಂದಿನ ಸೀಟು ಬಿಟ್ಟು ಕೊಡದ ತಂದೆಯನ್ನು ಪುತ್ರನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಉತ್ತರ ದೆಹಲಿಯ ತಿಮಾರ್‌ಪುರ ಪ್ರದೇಶದಲ್ಲಿ ನಡೆದಿದೆ.
ಉತ್ತರಾಖಂಡ್‌ನಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಬಾಡಿಗೆಗೆ ಪಡೆದಿದ್ದ ಟೆಂಪೋದಲ್ಲಿ ಮುಂದಿನ ಸೀಟು ಬಿಟ್ಟು ಕೊಡದಿದ್ದಕ್ಕೆ 26 ವರ್ಷದ ಪುತ್ರ ಗುಂಡಿಟ್ಟು ತನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ಮೂಲಗಳು ತಿಳಿಸಿವೆ.
ಆರೋಪಿ ದೀಪಕ್ ಎಂಬಾತನನ್ನು ಸ್ಥಳದಿಂದ ಬಂಧಿಸಲಾಗಿದ್ದು, 11 ಜೀವಂತ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ. ತಿಮಾರ್‌ಪುರದ ಎಂಎಸ್ ಬ್ಲಾಕ್ ಬಳಿ ಈ ಘಟನೆ ನಡೆದಿದ್ದು, ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರು ಆರೋಪಿಯಿಂದ ಬಂದೂಕನ್ನು ಕಸಿದುಕೊಂಡಿದ್ದಾರೆ.
ಪಾದಚಾರಿ ಮಾರ್ಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತನನ್ನು 60 ವರ್ಷದ ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ನಿವೃತ್ತ ಸಬ್-ಇನ್‌ಸ್ಪೆಕ್ಟರ್ ಆಗಿದ್ದ ಅವರನ್ನು ಕೂಡಲೇ ಎಚ್‌ಆರ್‌ಹೆಚ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗುಂಡು ಅವರ ಎಡ ಕೆನ್ನೆಗೆ ಬಡಿದು, ಅವರ ಮುಖಕ್ಕೆ ಅನೇಕ ಗುಂಡಿನ ಗಾಯಗಳಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಸಿಐಎಸ್‌ಎಫ್‌ನಿಂದ ಸುರೇಂದ್ರ ಸಿಂಗ್ ನಿವೃತ್ತರಾದ ನಂತರ ಕುಟುಂಬವು ಉತ್ತರಾಖಂಡದ ತಮ್ಮ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ತಯಾರಿ ನಡೆಸುತಿತ್ತು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
Advertisement