
ಹೈದರಾಬಾದ್: ತೆಲಂಗಾಣದಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದ್ದು, ಅಕ್ರಮ ಸಂಬಂಧದಲ್ಲಿ ತೊಡಗಿದ್ದ ಪುರುಷ-ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಬೆತ್ತಲೆಗೊಳಿಸಿ, ತಲೆ ಬೋಳಿಸಿ ಥಳಿಸಿದ್ದಾರೆ.
ತೆಲಂಗಾಣದ ಹನುಮಕೊಂಡದ ಧರ್ಮಸಾಗರ ಮಂಡಲದ ತಟಿಕಾಯ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಗ್ರಾಮದ ನಿವಾಸಿ ರಾಜು ಮತ್ತು ಅದೇ ಗ್ರಾಮದ ಮತ್ತೋರ್ವ ಮಹಿಳೆ ಅಕ್ರಮ ಸಂಬಂಧದಲ್ಲಿ ತೊಡಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು ಅವರನ್ನು ಗ್ರಾಮದ ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿದ್ದಾರೆ.
ರಾಜು ಮತ್ತು ಮಹಿಳೆಯನ್ನು ಮರಕ್ಕೆ ಕಟ್ಟಿ ಅವರ ತಲೆ ಬೋಳಿಸಿ ವಿವಸ್ತ್ರಗೊಳಿಸಿದ್ದಾರೆ. ಬಳಿಕ ಇಬ್ಬರ ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಗ್ಗದಿಂದ ಥಳಿಸಿದ್ದಾರೆ. ಇಬ್ಬರೂ ತಮ್ಮ ತಪ್ಪಿಗೆ ಮಂಡಿಯೂರಿ ಕ್ಷಮೆ ಯಾಚಿಸಿದರೂ ಕೇಳದ ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿದ್ದಾರೆ. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಮುನುಗು ಮಂಡಲದ ಬೊಲೊಲುಪಲ್ಲಿ ನಿವಾಸಿ ರಾಜು, ಹತ್ತು ವರ್ಷಗಳ ಹಿಂದೆ ತಟಿಕಾಯ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ರಾಜುಗೆ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವಿತ್ತು. ಹತ್ತು ದಿನಗಳ ಹಿಂದೆ, ಇಬ್ಬರೂ ಒಟ್ಟಿಗೆ ಗ್ರಾಮದಿಂದ ಓಡಿಹೋಗಿದ್ದರು. ಅವರನ್ನು ಹುಡುಕುತ್ತಿದ್ದ ರಾಜು ಅವರ ಕುಟುಂಬ ಸದಸ್ಯರು ಕೊನೆಗೂ ಅವರನ್ನು ಪತ್ತೆಹಚ್ಚಿದ್ದಾರೆ.
ಮನೆಯೊಂದರಲ್ಲಿ ಇಬ್ಬರೂ ಒಟ್ಟಿಗೆ ಇರುವುದನ್ನು ಪತ್ತೆ ಮಾಡಿದ ಕುಟುಂಬಸ್ಥರು ಇಬ್ಬರನ್ನೂ ತಟಿಕಾಯ ಗ್ರಾಮಕ್ಕೆ ಕರೆತಂದು ಗ್ರಾಮದ ಹಿರಿಯರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಗ್ರಾಮದ ಬೇವಿನ ಮರಕ್ಕೆ ಇಬ್ಬರನ್ನೂ ಕಟ್ಟಿಹಾಕಿದ್ದಾರೆ. ಈ ವೆೇಳೆ ಮಹಿಳೆಯನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡರು. ಆಕೆಯನ್ನು ಕಬ್ಬಿಣದ ಗ್ರಿಲ್‌ಗಳಿಗೆ ಕಟ್ಟಿ, ವಿವಸ್ತ್ರಗೊಳಿಸಿ, ಆಕೆಯ ಜನನಾಂಗಕ್ಕೆ ಹಗ್ಗದಿಂದ ಥಳಿಸಿದ್ದಾರೆ. ಅಲ್ಲದೆ ಇಬ್ಬರಿಗೂ ತಲೆ ಬೋಳಿಸಿದ್ದಾರೆ. ಈ ಘಟನೆ ಬಳಿಕ ರಾಜು ಮತ್ತು ಮಹಿಳೆ ನಾಪತ್ತೆಯಾಗಿದ್ದಾರೆ.
ವಿಡಿಯೋ ವೈರಲ್
ಐದು ದಿನಗಳ ಹಿಂದೆ ನಡೆದ ಈ ಘಟನೆ ಇಂದು ಬೆಳಕಿಗೆ ಬಂದಿದೆ. ಈ ಕ್ರೂರ ಘಟನೆಯ ನಂತರ, ರಾಜು ಮತ್ತು ಮಹಿಳೆ ನಾಪತ್ತೆಯಾಗಿದ್ದರು. ಮಹಿಳೆಯ ಮೇಲಿನ ಹಲ್ಲೆಯ ವಿಡಿಯೋವನ್ನು ಕೆಲವರು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಪೊಲೀಸರು ಧರ್ಮಸಾಗರ್ ಪೊಲೀಸರು ಥಟಿಕಾಯಲ ಗ್ರಾಮಕ್ಕೆ ತಲುಪಿ ದಾಳಿಯಲ್ಲಿ ಭಾಗವಹಿಸಿದ ಕುಟುಂಬ ಸದಸ್ಯರ ವಿವರಗಳನ್ನು ಸಂಗ್ರಹಿಸಿದರು. ಮಹಿಳೆಯನ್ನು ಚಿತ್ರಹಿಂಸೆ ನೀಡಿದ ಕುಟುಂಬವನ್ನು ವಶಕ್ಕೆ ಪಡೆಯಲಾಯಿತು. ಅಲ್ಲದೆ, ಕಾಣೆಯಾಗಿರುವ ರಾಜು ಮತ್ತು ಮಹಿಳೆಯನ್ನು ಹುಡುಕಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
Advertisement