
ಪಾಟ್ನಾ: ಬಿಹಾರದ ಕಾಲೇಜೊಂದರಲ್ಲಿ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ವೈದ್ಯಯಾಗುವ ಕನಸಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.
ಬಿಹಾರದ ಕಾಲೇಜೊಂದರಲ್ಲಿ 11ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಖುಷ್ಬೂ ಕುಮಾರಿಗೆ ಭಾನುವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಅನಿರೀಕ್ಷಿತ ದೂರವಾಣಿ ಕರೆ ಮಾಡಿದ್ದು, ಸಚಿವರು ವಿದ್ಯಾರ್ಥಿನಿಗೆ ವಿಜ್ಞಾನ ವಿಭಾಗದಲ್ಲಿ ಪ್ರವೇಶದ ಭರವಸೆ ನೀಡಿದ್ದು ಮಾತ್ರವಲ್ಲದೆ, ವೈದ್ಯೆಯಾಗುವ ಆಕೆಯ ಕನಸನ್ನು ನನಸಾಗಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿನಿ ಖುಷ್ಬೂ ಕುಮಾರಿ, 'ನನ್ನಂತಹ ಬಡ ಹುಡುಗಿ ಕೇಂದ್ರ ಶಿಕ್ಷಣ ಸಚಿವರಿಂದ ಇಂತಹ ಮಾತು ಕೇಳಿದ್ದು ನಂಬಲಾಗದ ಸಂಗತಿ. ಅವರ ಕರೆ ಸ್ವೀಕರಿಸಿದಾಗ, ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ಕೇಂದ್ರ ಸಚಿವ ಎಂದು ನಾನು ನಂಬಲೂ ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.
ಮಾರ್ಚ್ 8, ಮಹಿಳಾ ದಿನದಂದು ಖುಷ್ಬೂ ತನ್ನ ಹೋರಾಟಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವೃತ್ತಿಯಲ್ಲಿ ಹೈನುಗಾರಿಕೆಯಲ್ಲಿ ಆಕೆಯ ತಂದೆ ಉಪೇಂದ್ರ ರೈ ನಿತ್ಯ ಹಾಲು ಕರೆದು ಅದನ್ನು ಮಾರಾಟ ಮಾಡಿ ಬಂದ ಹಣದಿಂದ ಸಂಸಾರ ನಡೆಸುತ್ತಿದ್ದರು.
ಅಂತೆಯೇ ಅದೇ ಹಣದಲ್ಲಿ ಖುಷ್ಬೂ ಕುಮಾರಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಜೀವಶಾಸ್ತ್ರದ ವಿದ್ಯಾರ್ಥಿನಿಯಾಗಿ ತನ್ನ ಅಧ್ಯಯನದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ವಿದ್ಯಾರ್ಥಿನಿ ಖುಷ್ಬೂ ಕುಮಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದರು.
"ನಾನು 10ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 399 ಅಂಕಗಳನ್ನು ಗಳಿಸಿದ್ದೆ. ಆದರೆ ನನಗೆ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಸಿಗಲಿಲ್ಲ. ನನ್ನ ಪೋಷಕರು ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಲು ಒತ್ತಾಯಿಸಿದಾಗ ನಾನು ಕಲಾ ವಿಭಾಗದಲ್ಲಿ ಪ್ರವೇಶ ಪಡೆದೆ. ವಿಜ್ಞಾನ ವಿಭಾಗದಲ್ಲಿ ತನ್ನ ಅಧ್ಯಯನದ ವೆಚ್ಚವನ್ನು ಭರಿಸಲು ಪೋಷಕರ ಸಾಧ್ಯವಾಗದಿದ್ದ ಕಾರಣ ಕಲಾ ವಿಭಾಗದಲ್ಲಿ ಪ್ರವೇಶ ಪಡೆಯಬೇಕಾಯಿತು ಎಂದು ಹೇಳಿದ್ದರು.
ಈ ವಿಡಿಯೋ ವೈರಲ್ ಆಗುತ್ತಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, 'ಖುಷ್ಬೂ ಅವರಿಗೆ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಮತ್ತು ದಾನಾಪುರದ ಹಿರಿಯ ಅಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಪೋಷಕರ ಸಂತಸ
ಇನ್ನು ಈ ಬಗ್ಗೆ ಮಾತನಾಡಿರುವ ಖುಷ್ಬೂ ಪೋಷಕರು, 'ನಮ್ಮ ಆರ್ಥಿಕ ಸ್ಥಿತಿ ಖುಷ್ಬೂಗೆ ವೈದ್ಯಕೀಯ ವಿದ್ಯಾಬ್ಯಾಸ ಅವಕಾಶ ನೀಡಲಿಲ್ಲ. ಆದರೆ ಕೇಂದ್ರ ಸಚಿವರು ಮತ್ತು ಜಿಲ್ಲಾ ಅಧಿಕಾರಿಗಳು ಇಬ್ಬರೂ ಆಕೆಯ ನೆರವಿಗೆ ಧಾವಿಸಿದ್ದು, ವೈದ್ಯೆಯಾಗಿ ಆಕೆಯ ವೃತ್ತಿಜೀವನ ಮುಂದುವರಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಅವರು 'ಜಿಲ್ಲಾಡಳಿತವು ಖುಷ್ಬೂ ಅವರ ಆಯ್ಕೆಯ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
Advertisement