
ಘಾಜಿಯಾಬಾದ್: ಗಾಜಿಯಾಬಾದ್'ನ ಭೋಜ್‌ಪುರ ಪೊಲೀಸ್ ಠಾಣೆ ಪ್ರದೇಶದ ಪೇಪರ್ ಮಿಲ್ ವೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ 6 ಗಂಟೆಗೆ ದುರ್ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ಬಾಯ್ಲರ್ ಸ್ಫೋಟಗೊಂಡ ಕಾರಣ ಮೂವರು ಕಾರ್ಮಿಕರು 50 ಅಡಿ ಮೇಲೆ ಎಗರಿ, ಕೆಳಗೆ ಬಿದ್ದಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಬಿದ್ದಿದ್ದವು ಎಂದು ಮೂಲಗಳು ತಿಳಿಸಿವೆ. ಮೃತ ಕಾರ್ಮಿಕರನ್ನು ಯೋಗೇಂದ್ರ, ಅನುಜ್ ಮತ್ತು ಅವಧೇಶ್ ಎಂದು ಗುರುತಿಸಲಾಗಿದೆ.
ಉಪ ಪೊಲೀಸ್ ಆಯುಕ್ತ (ಡಿಸಿಪಿ) ಗ್ರಾಮೀಣ ಸುರೇಂದ್ರ ನಾಥ್ ತಿವಾರಿ ಅವರು ಮಾತನಾಡಿ, ಕಾರ್ಖಾನೆ ಮಾಲೀಕ ಅವ್ನೀಶ್ ಮೋದಿನಗರದ ನಿವಾಸಲಿಯಾಗಿದ್ದು, ಕಾರ್ಖಾನೆಯಲ್ಲಿ ಲ್ಯಾಮಿನೇಷನ್ ಪೇಪರ್'ಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಮೃತರ ಕುಟುಂಬರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Advertisement