
ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 50,000 ಕೋಟಿ ಮೀಸಲಿಡಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್ನಲ್ಲಿ ಸೇನೆಗೆ ಒಟ್ಟು 6.81 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದರು. ಇದು 2024-25ರಲ್ಲಿನ 6.22 ಲಕ್ಷ ಕೋಟಿ ರೂಪಾಯಿಗಳಿಗಿಂತ ಶೇ.9.2 ರಷ್ಟು ಹೆಚ್ಚು ಮಾಡಲಾಗಿತ್ತು.
ಈಗ ಹೆಚ್ಚುವರಿಯಾಗಿ 50,000 ಕೋಟಿ ರೂಪಾಯಿಗಳಷ್ಟು ಪ್ರಸ್ತಾವನೆ ಸಲ್ಲಿಸಲಾಗಿದ್ದರಿಂದ ಮುಂದೆ ಇದು 7 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗುವ ನಿರೀಕ್ಷೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಸಿಂಧೂರದ ಬಳಿಕ ಸೇನೆಗೆ ಹೆಚ್ಚುವರಿ ಹಣ ಮೀಸಲು ಇಡಲು ರಕ್ಷಣಾ ಬಜೆಟ್ನಲ್ಲಿ ರೂ.50 ಸಾವಿರ ಕೋಟಿ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಹೆಚ್ಚುವರಿ ಹಣ ಪಡೆಯಲು ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಅನುಮತಿ ಪಡೆಯಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಅನುದಾನದಿಂದ ಹೊಸ ಶಸ್ತ್ರಾಸ್ತ್ರಗಳು, ರಕ್ಷಣಾ ಸಾಮಗ್ರಿ ಹಾಗೂ ತಂತ್ರಜ್ಞಾನ ಖರೀದಿ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಗಿಸುವ ಸಾಧ್ಯತೆಗಳಿವೆ.
ಎನ್ಡಿಎ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ರಕ್ಷಣಾ ಬಜೆಟ್ ಮೂರು ಪಟ್ಟು ಹೆಚ್ಚಾಗಿದೆ. 2014-15ರಲ್ಲಿ ರಕ್ಷಣಾ ಬಜೆಟ್ 2.29 ಲಕ್ಷ ಕೋಟಿಗಳಾಗಿತ್ತು. ಇದು ಈಗ 6.81 ಲಕ್ಷ ಕೋಟಿ ರೂಪಾಯಿಗಳು ಆಗಿದೆ. ಇದು ಕೇಂದ್ರ ಸರ್ಕಾರದ ಒಟ್ಟು ಬಜೆಟ್ನ ಶೇ.13.45 ರಷ್ಟು ಆಗಿದ್ದು, ಎಲ್ಲ ಸಚಿವಾಲಯಗಳಿಗಿಂತ ರಕ್ಷಣಾ ಇಲಾಖೆ ಅತಿ ಹೆಚ್ಚು ಅನುದಾನ ಪಡೆಯುತ್ತಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ಈ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ್ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ರಕ್ಷಣಾ ವಲಯದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
Advertisement