
ಲಖನೌ: ಹಣಕ್ಕಾಗಿ ನನ್ನ ಗಂಡನೇ ನನ್ನ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಅರೆನಗ್ನ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾನೆ ಎಂದು ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಸರ್ಕಾರಿ ವೈದ್ಯರಾಗಿರುವ ಡಾ. ವರುಣೇಶ್ ದುಬೆ ಎಂಬಾತ ತನ್ನ ಪತ್ನಿ ಸಿಂಪಿ ಪಾಂಡೆ ಎಂಬುವವರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಕಳೆದ ಐದು ದಿನಗಳಿಂದ ಈ ವಿಡಿಯೋ ವೈರಲ್ ಆಗುತ್ತಿದೆ ಎಂದು ಆರೋಪಿಸಿ ಪತ್ನಿ ಸಿಂಪಿ ಪಾಂಡೆ ಪೊಲೀಸ್ ದೂರು ನೀಡಿದ್ದಾರೆ.
ಸಂತ ಕಬೀರ್ ನಗರ ಜಿಲ್ಲೆಯ ಖಲೀಲಾಬಾದ್ ಸಿಎಚ್‌ಸಿಯ ಉಸ್ತುವಾರಿ ಡಾ. ವರುಣೇಶ್ ದುಬೆ ವಿರುದ್ಧ ಅವರ ಪತ್ನಿಯೇ ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನ್ನ ಪತಿ ತನ್ನ ಅಶ್ಲೀಲ ವಿಡಿಯೋಗಳನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ನನ್ನ ಬಟ್ಟೆಗಳನ್ನು ಅವನೇ ಧರಿಸಿ ಬಳಿಕ ಇತರೆ ಪುರುಷರೊಂದಿಗೆ ಅಶ್ಲೀಲ ವಿಡಿಯೋ ತಯಾರಿಸಿ ಬಳಿಕ ಅವುಗಳನ್ನು ಕೃತಕಬುದ್ದಿಮತ್ತೆ ಬಳಸಿ ತನ್ನ ಅಶ್ಲೀಲ ವಿಡಿಯೋಗಳಾಗಿ ಬದಲಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಪತ್ನಿ ಸಿಂಪಿ ಪಾಂಡೆ ದೂರಿನಲ್ಲಿ ಆರೋಪಿಸಿದ್ದಾರೆ.
ಅಶ್ಲೀಲ ಸೈಟ್ ಗಳಲ್ಲಿ ವಿಡಿಯೋ ಪತ್ತೆ
ಕೆಲ ಅಶ್ಲೀಲ ವೆಬ್ ಸೈಟ್ ಗಳಲ್ಲಿ ನನ್ನ ವಿಡಿಯೋ ಇರುವ ಕುರಿತು ನನಗೆ ಮಾಹಿತಿ ತಿಳಿಯಿತು. ಅವು ಪಾವತಿಸಿ ನೋಡಬೇಕಾದ ಸೈಟ್‌ಗಳಾಗಿವೆ. ನಾವು ಹಣ ಪಾವತಿಸಿ ಅದನ್ನು ತೆರೆದಾಗ, ಅದರಲ್ಲಿ ನನ್ನ ವಿಡಿಯೋ ನೋಡಿ ನಾವು ದಿಗ್ಭ್ರಮೆಗೊಂಡೆ.
ಆ ವಿಡಿಯೋದಲ್ಲಿ ನಾವು ಮನೆಯಲ್ಲಿ ಹಾಕಿದ್ದ ವಾಲ್‌ಪೇಪರ್ ಗೋಚರಿಸುತ್ತಿತ್ತು. ಅದು ನಮ್ಮದೇ ಮನೆಯಲ್ಲಿ ಚಿತ್ರೀಕರಿಸಿದ ವಿಡಿಯೋ ಆಗಿತ್ತು. ನನ್ನ ಗಂಡ ಅಶ್ಲೀಲ ವೀಡಿಯೊಗಳನ್ನು ಮಾಡುತ್ತಿದ್ದ ಸ್ಥಳ ಅದು. ನಾನು ನನ್ನ ಗಂಡನೊಂದಿಗೆ ಈ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ, ಆತ ನನ್ನನು ಮತ್ತು ನನ್ನ ಸಹೋದರನನ್ನು ಥಳಿಸಿದ ಎಂದು ಪತ್ನಿ ಸಿಂಪಿ ಪಾಂಡೆ ಆರೋಪಿಸಿದ್ದಾರೆ.
ಪತ್ನಿ ಆರೋಪ ಅಲ್ಲಗಳೆದ ಪತಿ
ಇನ್ನು ಪತ್ನಿಯ ಆರೋಪಗಳನ್ನು ಅಲ್ಲಗಳೆದಿರುವ ಪತಿ ಡಾ. ವರುಣೇಶ್ ದುಬೆ, ಪತ್ನಿಯ ಆರೋಪಗಳು ಸತ್ಯಕ್ಕೆ ದೂರವಾದದ್ದು.. ನಮ್ಮದು ಪ್ರೇಮ ವಿವಾಹ. ಆದರೆ ಮದುವೆ ಬಳಿಕ ಆಕೆ ಸಂಪೂರ್ಣ ಬದಲಾಗಿದ್ದಾಳೆ. ಹಣದಾಸೆ ನೆತ್ತಿಗೇರಿದೆ. ನನ್ನ ಆಸ್ತಿ ಲಪಟಾಯಿಸಲು ಸಂಚು ರೂಪಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಇದೀಗ ಅಶ್ಲೀಲ ವಿಡಿಯೋ ನಾಟಕ ಮಾಡುತ್ತಿದ್ದಾಳೆ ಎಂದು ಹೇಳಿದ್ದಾರೆ.
ಆಸ್ತಿಗಾಗಿ ಸಿಂಪಿ ಪಾಂಡೆ ಮತ್ತು ಆಕೆಯ ಕುಟುಂಬಸ್ಥರು ನನಗೆ ಮತ್ತು ನನ್ನ ಕುಟುಂಬಕ್ಕೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರ ಹಿಂಸೆಯಿಂದಲೇ ನನ್ನ ತಂದೆ ಪ್ರಾಣಬಿಟ್ಟಿದ್ದರು. ಇದೇ ವಿಚಾರವಾಗಿ ನನ್ನ ತಂದೆ ಗೋರಖ್‌ನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನನ್ನ ಚಿಕ್ಕಮ್ಮನನ್ನೂ ಸಹ ತುಂಬಾ ಹಿಂಸಿಸಿದರು. ಆಸ್ತಿಗಾಗಿ ನನ್ನ ಮಗನನ್ನೂ ಕೂಡ ಕೊಲ್ಲಲು ಆಕೆ ಹಿಂದೆಮುಂದೆ ಯೋಚಿಸುವುದಿಲ್ಲ.
ನನಗರಿವಿಲ್ಲದಂತೆಯೇ ನನ್ನ ಮೊಬೈಲ್ ನಲ್ಲಿ ಕೆಲ ವಿಡಿಯೋಗಳನ್ನು ಹಾಕಿ ಅದನ್ನು ನಾನೇ ಮಾಡಿದ್ದು ಎಂದು ಆರೋಪಿಸುತ್ತಿದ್ದಾಳೆ. ಆಕೆಯೇ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನಾನು ಮನೆಯಿಂದ ಹೊರ ಹೋದಾಗ ಆತನೊಂದಿಗೆ ಮನೆಯಲ್ಲಿ ಸಮಯ ಕಳೆಯುತ್ತಿದ್ದಳು. ಈ ಬಗ್ಗೆ ನನ್ನ ಗಮನಕ್ಕೆ ಬಂದಾಗ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದೆ.
ಆದರೆ ಅದನ್ನೂ ತೆಗೆಸಿದಳು. ಈ ವಿಚಾರ ಬಯಲಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದಳು. ಆಕೆಯ ವರ್ತನೆ ನೋಡಿ ನಾನೇ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಮಹಿಳೆ ದೂರಿನ ಅನ್ವಯ ಪತಿ ಡಾ. ವರುಣೇಶ್ ದುಬೆ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿರುವ ಪೊಲೀಸರು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement