
ಬರೇಲಿ: ಮರದಡಿ ಮಲಗಿದ್ದ ತರಕಾರಿ ವ್ಯಾಪಾರಿ ಅಲ್ಲಿಯೇ ಜೀವಂತ ಸಮಾಧಿಯಾದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯ ಬರಾದರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸ್ಮಶಾನದ ಬಳಿಯ ಮರದ ಕೆಳಗೆ ತರಕಾರಿ ವ್ಯಾಪಾರಿಯೊಬ್ಬರು ಮಲಗಿದ್ದ ವೇಳೆ ಅಲ್ಲಿದೆ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿ ಆತನ ಮೇಲೆಯೇ ಭಾರಿ ಪ್ರಮಾಣದ ತ್ಯಾಜ್ಯ ಸುರಿದಿದ್ದಾರೆ. ಈ ವೇಳೆ ತ್ಯಾಜ್ಯದ ಕೆಳಗೆ ಸಿಲುಕಿದ ತರಕಾರಿ ವ್ಯಾಪಾರಿ ಸ್ಥಳದಲ್ಲೇ ಜೀವಂತ ಸಮಾಧಿಯಾಗಿದ್ದಾನೆ.
ಮೃತನನ್ನು ಶಾಂತಿಪುರದ ನಿವಾಸಿ ಸುನಿಲ್ ಕುಮಾರ್ ಪ್ರಜಾಪತಿ (45) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಈತ ತರಕಾರಿ ವ್ಯಾಪಾರಿಯಾಗಿದ್ದು ಶುಕ್ರವಾರ ಕುಡಿದ ಅಮಲಿನಲ್ಲಿ ಸುನಿಲ್ ಕುಮಾರ್ ಪ್ರಜಾಪತಿ ಮರದಡಿಯಲ್ಲಿ ಮಲಗಿದ್ದ.
ಇದೇ ವೇಳೆ ಆ ಸ್ಥಳದಲ್ಲಿ ಬರೇಲಿ ಕಾರ್ಪೋರೇಷನ್ ಸಿಬ್ಬಂದಿ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದು, ಟ್ರಾಕ್ಟರ್ ಮೂಲಕ ಒಳಚರಂಡಿ ತ್ಯಾಜ್ಯ ತೆಗೆದು ಸುನಿಲ್ ಕುಮಾರ್ ಪ್ರಜಾಪತಿ ಮೇಲೆ ಸುರಿದಿದೆ. ಈ ವೇಳೆ ಕುಡಿದ ಅಮಲಿನಲ್ಲಿ ಗಾಢ ನಿದ್ರೆಯಲ್ಲಿದ್ದ ಪ್ರಜಾಪತಿ ನಿದ್ರೆಯಿಂದ ಏಳಲಾಗದೇ ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಕುಡಿದ ಅಮಲಿನಲ್ಲಿದ್ದ ಶಾಂತಿಪುರದ ಸುನಿಲ್ ಕುಮಾರ್ ಪ್ರಜಾಪತಿ (45) ತಮ್ಮ ಮನೆಯ ಬಳಿಯ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ನಯೀಮ್ ನೇತೃತ್ವದ ಪೌರಕಾರ್ಮಿಕರ ತಂಡವು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕೆಸರು ತುಂಬಿಕೊಂಡು ಅಲ್ಲಿಯೇ ಮಲಗಿದ್ದ ಪ್ರಜಾಪತಿ ಮೇಲೆ ಸುರಿದಿದೆ ಎಂದು ಹೇಳಿದ್ದಾರೆ.
ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪೌರಕಾರ್ಮಿಕರ ವಿರುದ್ಧ ಬರಾದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಸಂತ್ರಸ್ಥ ಪ್ರಜಾಪತಿ ಮಗ ತನ್ನ ತಂದೆ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರುವುದನ್ನುತಿಳಿದು ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳೀಯರ ಸಹಾಯದಿಂದ ಅವರನ್ನು ಹೊರತೆಗೆಯಲಾಯಿತು.
ಆದರೆ ಅಷ್ಟು ಹೊತ್ತಿಗಾಗಲೇ ಉಸಿರುಗಟ್ಟಿ ಪ್ರಜಾಪತಿ ಸಾವನ್ನಪ್ಪಿದ್ದ. ಪ್ರಜಾಪತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಪುರಸಭೆ ಆಯುಕ್ತ ಸಂಜೀವ್ ಕುಮಾರ್ ಮೌರ್ಯ ಹೇಳಿದ್ದಾರೆ.
Advertisement