
ಪಾಟ್ನಾ: ವಿಚಿತ್ರ ಘಟನೆಯೊಂದರಲ್ಲಿ ಮದುವೆಗೆ ನೃತ್ಯ ಮಾಡಲು ಬಂದಿದ್ದ ಡ್ಯಾನ್ಸರ್ ಗಳೇ ಮದುಮಗನನ್ನು ಅಪಹರಣ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಹೌದು.. ಮದುವೆ ಮನೆಯಲ್ಲಿ ಅತಿಥಿಗಳ ಮನರಂಜನೆಗೆಂದು ಕರೆಸಲಾಗಿದ್ದ ನೃತ್ಯಗಾರ್ತಿಯರೇ ಮದುಮಗನನ್ನು ಅಪಹರಣ ಮಾಡಿದ್ದಾರೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮದುವೆಗಾಗಿ ನೇಮಿಸಿಕೊಳ್ಳುವ ನೃತ್ಯ ತಂಡವಾದ ಲೌಂಡಾ ನಾಚ್ನ ಸದಸ್ಯರು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ವರನನ್ನು ಅಪಹರಿಸಿದೆ ಎಂದು ಆರೋಪಿಸಲಾಗಿದೆ.
ಆಗಿದ್ದೇನು?
ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ನೋಡ ನೋಡುತ್ತಲೇ ಅದು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿ, ಆ ತಂಡದವರು ಮದುವೆ ಮಂಟಪದೊಳಗೆ ನುಗ್ಗಿ, ವಧು ಮತ್ತು ಆಕೆಯ ಕುಟುಂಬ ಸೇರಿದಂತೆ ಅತಿಥಿಗಳ ಮೇಲೆ ದಾಳಿ ಮಾಡಿದರು.
ಇದ್ದಕ್ಕಿದ್ದಂತೆ ಅವರು ಮನೆಗೆ ನುಗ್ಗಿ ವರನನ್ನು ಹೊಡೆಯಲು ಪ್ರಾರಂಭಿಸಿದರು. ಬಳಿಕ ಅವರ ವರನನ್ನು ಅಪಹರಿಸಿದರು ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.
ಆಭರಣ-ಹಣ ಲೂಟಿ
ಇದೇ ವೇಳೆ ಅಪಹರಣಕಾರರು ಮನೆಯೊಳಗಿನಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಹ ದೋಚಿದರು ಎಂದು ವಧುವಿನ ತಾಯಿ ವಿದ್ಯಾವತಿ ದೇವಿ ಹೇಳಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಬಂದರು. ಆದರೆ ಅಷ್ಟರಲ್ಲಾಗಲೇ ಅಪಹರಣಕಾರರು ಪರಾರಿಯಾಗಿದ್ದರು.
ಅಪಹರಣಕಾರರ ಬಂಧನ
ಆದಾಗ್ಯೂ, ಪೊಲೀಸರು ತೀವ್ರ ಹುಡುಕಾಟ ನಡೆಸಿ 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದರು. ಅಪಹರಣಕಾರರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಪೊಲೀಸ್ ವರಿಷ್ಠಾಧಿಕಾರಿ ಅವಧೇಶ್ ದೀಕ್ಷಿತ್ ಮಾತನಾಡಿ, ಹಣಕಾಸಿನ ವಿವಾದವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ.
Advertisement