
ನವದೆಹಲಿ: ಭಾರತ ಮತ್ತು ಪಾಕಿಸ್ತನಾ ನಡುವಿನ ಸಂಘರ್ಷ ತಡೆದಿದ್ದೇ ನಾವು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದು, ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೌನ ಕುರಿತು ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ.
ಡೊನಾಲ್ಡ್ ಟ್ರಂಪ್ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ರಂಪ್ ಅವರ ವೀಡಿಯೊ ಕ್ಲಿಪ್ ಅನ್ನು ಟ್ಯಾಗ್ ಮಾಡಿ, ಕಿಡಿಕಾರಿದ್ದಾರೆ.
21 ದಿನಗಳಲ್ಲಿ 11 ಬಾರಿ ಮೋದಿಯ "ದೊಡ್ಡ ಸ್ನೇಹಿತ" ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದಲ್ಲಿ ತನ್ನ ಪಾತ್ರವಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಯಾವಾಗ ಮೌನ ಮುರಿದು ಮಾತನಾಡುತ್ತಾರೆಂದು ಪ್ರಶ್ನಿಸಿದ್ದಾರೆ.
ಟ್ರಂಪ್ ಅವರ ಕಾರ್ಯದರ್ಶಿ ಮೇ 23 ರಂದು ನ್ಯೂಯಾರ್ಕ್ ಮೂಲದ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಟ್ರಂಪ್ ಸ್ನೇಹಿತರಾಗಿರುವ ಮೋದಿ ಮಾತ್ರ ಮೌನದಿಂದಲೇ ನಿರ್ಲಕ್ಷ್ಯಸುತ್ತಲೇ ಇದ್ದಾರೆ.
ಮೋದಿ ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಮೋದಿಯಂತೆಯೇ ಟ್ರಂಪ್ ಮಾತನಾಡುತ್ತಿದ್ದಾರೆಯೇ (ಸುಳ್ಳು) ಅಥವಾಲ ಶೇ.50ರಷ್ಟು ಸತ್ಯವನ್ನು ಮಾತನಾಡುತ್ತಿದ್ದಾರೆಯೇ? ಟ್ರಂಪ್ ಹೇಳಿಕೆ ಕುರಿತು ಕೂಡಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement