ತೆಲಂಗಾಣ: ಬಸ್ ಗೆ ಜಲ್ಲಿಕಲ್ಲು ತುಂಬಿದ್ದ ಟ್ರಕ್ ಡಿಕ್ಕಿ; ಸಾವಿನ ಸಂಖ್ಯೆ 24ಕ್ಕೆ ಏರಿಕೆ; ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 2 ಲಕ್ಷ ರೂ ಪರಿಹಾರ ಘೋಷಣೆ

ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ ಮಿರ್ಜಾಗುಡ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಘಟನೆ ವೇಳೆ ಬಸ್ ನಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
Telangana accident
ತೆಲಂಗಾಣ ಅಪಘಾತ
Updated on

ಹೈದರಾಬಾದ್: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸಂಭವಿಸಿದ ಬಸ್-ಲಾರಿ ನಡುವಿನ ಅಫಘಾತದಲ್ಲಿ ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿ ತೀವ್ರ ದುಃಖ ತಂದಿದೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಇದೇ ವೇಳೆ ಮೃತರ ಕುಟಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ ಬಹಾಗೂ ಗಾಯಾಳುಗಳಿಗೆ 50,000 ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ ಮಿರ್ಜಾಗುಡ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಘಟನೆ ವೇಳೆ ಬಸ್ ನಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಟಿಪ್ಪರ್ ಪಲ್ಟಿಯಾದ ಪರಿಣಾಮ ಜಲ್ಲಿಕಲ್ಲಿನ ಕೆಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ 24 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಜಲ್ಲಿ ತುಂಬಿದ್ದ ಲಾರಿ ಅತಿ ವೇಗದಲ್ಲಿ ಚಲಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಏತನ್ಮದ್ಯೆ ಮಿರ್ಜಗುಡ ರಸ್ತೆ ಅಪಘಾತದಿಂದ ಆಘಾತಕ್ಕೊಳಗಾಗಿರುವುದಾಗಿ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದು, ತಕ್ಷಣವೇ ಅಪಘಾತದ ಸ್ಥಳಕ್ಕೆ ಹೋಗಲು ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಅಗತ್ಯ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಬಸ್ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣ ಹೈದರಾಬಾದ್‌ಗೆ ಸ್ಥಳಾಂತರಿಸಲು ಮತ್ತು ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಸಿಎಸ್ ಮತ್ತು ಡಿಜಿಪಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ಅದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ಈ ನಡುವೆ ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಅವರು ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ನಾಗಿ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು. ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

Fire department personnel at the site after a tipper lorry carrying gravel collided head-on with a public transport bus, in Rangareddy district, Telangana.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ಸಾರಿಗೆ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ನಂತರ ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ.Photo | PTI

ಅಲ್ಲದೆ, ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಅವರು ರಂಗ ರೆಡ್ಡಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಆರ್‌ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ನಾಗರಿಕರು ಸಹಾಯ ಅಥವಾ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳಲ್ಲಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ: 9912919545, 9440854433.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com