

ತಿರುಮಲ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲ ದೇಗುಲದಲ್ಲಿ ಭಕ್ತರಿಗೆ ನೀಡಲಾಗುತ್ತಿದ್ದ ಲಡ್ಡು ಪ್ರಸಾದಕ್ಕೆ ಬಳಸಲಾಗುತ್ತಿದ್ದ ಕಲಬೆರಕೆ ತುಪ್ಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ದೇಗುಲಕ್ಕೆ ತುಪ್ಪ ರವಾನಿಸುತ್ತಿದ್ದ ಖಾಸಗಿ ಡೈರಿ ಒಂದೇ ಒಂದು ಹನಿ ಹಾಲನ್ನೂ ಬಳಸದೆ ತುಪ್ಪ ತಯಾರಿಸುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದೆ.
ಹೌದು.. ಈ ಹಿಂದೆ ಕರ್ನಾಟಕ ನಂದಿನಿ ತುಪ್ಪ ದರ ಹೆಚ್ಚು ಎಂದು ತಿರಸ್ಕರಿಸಿದ್ದ ತಿರುಮಲ ತಿರುಪತಿ ದೇಗುಲದ ಅಧಿಕಾರಿಗಳಿಗೆ ಅಗ್ಗದ ದರದಲ್ಲಿ ತಪ್ಪು ರವಾನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಖಾಸಗಿ ಡೈರಿ ಸರಿಯಾಗೆ ಪಂಗನಾಮ ಹಾಕಿದ್ದು, ಹಾಲನ್ನೇ ಬಳಸದೇ ರಾಸಾಯನಿಕಗಳಿಂದ ತುಪ್ಪ ತಯಾರಿಸಿ ಭಕ್ತರ ನಂಬಿಕೆಗೆ ದ್ರೋಹ ಬಗೆದಿರುವುದು ತನಿಖೆಯಿಂದ ಬಯಲಾಗಿದೆ.
ಉತ್ತರಾಖಂಡ ಮೂಲದ ಡೈರಿಯೊಂದು 2019 ರಿಂದ 2024ರ ನಡುವೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಕ್ಕೆ ಸುಮಾರು 68 ಲಕ್ಷ ಕೆಜಿ ನಕಲಿ ತುಪ್ಪವನ್ನು ಪೂರೈಕೆ ಮಾಡಿ 250 ಕೋಟಿ ರೂಪಾಯಿ ವಂಚಿಸಿರುವುದು ಬಯಲಾಗಿದೆ. ಹಾಲನ್ನೇ ಬಳಸದೆ, ರಾಸಾಯನಿಕಗಳನ್ನು ಬಳಸಿ ಈ ನಕಲಿ ತುಪ್ಪವನ್ನು ತಯಾರಿಸಲಾಗುತ್ತಿತ್ತು.
2022ರಲ್ಲಿ ಈ ಡೈರಿಯನ್ನು ಕಪ್ಪುಪಟ್ಟಿಗೆ ಸೇರಿಸಿದರೂ, ಅದು ಇತರ ಡೈರಿಗಳ ಮೂಲಕ ತನ್ನ ವಂಚನೆಯನ್ನು ಮುಂದುವರಿಸಿತ್ತು. ಒಮ್ಮೆ ಟಿಟಿಡಿಯಿಂದ ತಿರಸ್ಕೃತಗೊಂಡ ಪ್ರಾಣಿ ಕೊಬ್ಬು ಮಿಶ್ರಿತ ತುಪ್ಪವನ್ನೇ ಮರಳಿ ಪೂರೈಸಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಒಂದೇ ಒಂದು ಹನಿ ಹಾಲು ಬಳಸದೇ ತುಪ್ಪ ತಯಾರಿಕೆ
ಸಿಬಿಐ ತನಿಖೆಯಿಂದ ಈ ಬೃಹತ್ ಕರ್ಮಾಕಾಂಡ ಬಯಲಾಗಿದ್ದು, 2019 ರಿಂದ 2024ರ ನಡುವೆ ಈ ದಂಧೆ ನಡೆದಿದ್ದು, ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಈ ನಕಲಿ ತುಪ್ಪವನ್ನು ಬಳಸಲಾಗಿದೆ.
ಉತ್ತರಾಖಂಡದ ಭಗವಾನ್‌ಪುರದಲ್ಲಿ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಎಂಬುವರು ನಡೆಸುತ್ತಿದ್ದ 'ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ' ಈ ವಂಚನೆಯ ಕೇಂದ್ರಬಿಂದುವಾಗಿದ್ದು, ಈ ಡೈರಿಗೆ ಮೊನೊಡಿಗ್ಲಿಸರೈಡ್ಸ್ ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಆರೋಪಿ ಅಜಯ್ ಕುಮಾರ್ ಸುಗಂಧ್ ಬಂಧನದ ನಂತರ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಎಲ್ಲ ವಿವರಗಳನ್ನು ಕಲೆಹಾಕಿದೆ.
ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಎಸ್‌ಐಟಿ ಈ ವಿಷಯಗಳನ್ನು ಬಹಿರಂಗಪಡಿಸಿದೆ.
ತನಿಖೆಯ ಪ್ರಕಾರ, ಡೈರಿಯ ಮಾಲೀಕರು ನಕಲಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿ, ಹಾಲು ಖರೀದಿ ಮತ್ತು ಪಾವತಿಗೆ ಸಂಬಂಧಿಸಿದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. 2022ರಲ್ಲಿ ಟಿಟಿಡಿ ಒಪ್ಪಂದದಿಂದ ಈ ಡೈರಿಯನ್ನು ಅನರ್ಹಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಆದರೂ, ತಿರುಪತಿ ಮೂಲದ ವೈಷ್ಣವಿ ಡೈರಿ, ಉತ್ತರ ಪ್ರದೇಶದ ಮಾಲ್ ಗಂಗಾ ಮತ್ತು ತಮಿಳುನಾಡಿನ ಎಆರ್ ಡೈರಿ ಫುಡ್ಸ್‌ನಂತಹ ಇತರ ಡೈರಿಗಳ ಮೂಲಕ ಟೆಂಡರ್ ಪಡೆದು ಟಿಟಿಡಿಗೆ ನಕಲಿ ತುಪ್ಪ ಪೂರೈಕೆಯನ್ನು ಮುಂದುವರಿಸಿದ್ದರು ಎಂದು ಹೇಳಲಾಗಿದೆ.
ಕೊಬ್ಬು ಮಿಶ್ರಿತ ತುಪ್ಪ
ಕಳೆದ ವರ್ಷ ಜುಲೈನಲ್ಲಿ, ಎಆರ್ ಡೈರಿ ಪೂರೈಸಿದ್ದ ಪ್ರಾಣಿಗಳ ಕೊಬ್ಬು ಮಿಶ್ರಿತ ನಾಲ್ಕು ಕಂಟೇನರ್ ತುಪ್ಪವನ್ನು ಟಿಟಿಡಿ ತಿರಸ್ಕರಿಸಿತ್ತು. ಆದರೆ ಸಿಬಿಐ ತನಿಖೆಯಲ್ಲಿ, ಈ ತುಪ್ಪದ ಟ್ಯಾಂಕರ್‌ಗಳು ಎಆರ್ ಡೈರಿಗೆ ಮರಳಲೇ ಇಲ್ಲ ಎಂಬುದು ತಿಳಿದುಬಂದಿದೆ. ಬದಲಾಗಿ ಅವುಗಳನ್ನು ವೈಷ್ಣವಿ ಡೈರಿ ಘಟಕದ ಸಮೀಪವಿದ್ದ ಸ್ಥಳೀಯ ಕಲ್ಲುಪುಡಿ ಮಾಡುವ ಘಟಕಕ್ಕೆ ಸಾಗಿಸಲಾಗಿತ್ತು.
ಬಳಿಕ ಆಗಸ್ಟ್ 2024ರಲ್ಲಿ, ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ಟಿಟಿಡಿಗೆ ತುಪ್ಪ ಪೂರೈಕೆದಾರರಾಗಿದ್ದ ವೈಷ್ಣವಿ ಡೈರಿಯು, ಟ್ರಕ್‌ಗಳ ಮೇಲಿನ ಲೇಬಲ್‌ಗಳನ್ನು ಬದಲಾಯಿಸಿ, ನಕಲಿ ತುಪ್ಪದ ಗುಣಮಟ್ಟ ಮತ್ತು ಸ್ಥಿರತೆಯನ್ನು ಸುಧಾರಿಸಿ, ಟಿಟಿಡಿ ತಿರಸ್ಕರಿಸಿದ್ದ ಅದೇ ತುಪ್ಪವನ್ನು ಮರಳಿ ದೇವಸ್ಥಾನಕ್ಕೆ ಪೂರೈಸಿದೆ. ಈ ತುಪ್ಪವನ್ನು ನಂತರ ಪವಿತ್ರ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗಿದೆ ಎಂದು ಸಿಬಿಐ ವರದಿ ಮಾಡಿದೆ.
50 ಲಕ್ಷ ರೂ ಲಂಚ
ಅಂತೆಯೇ ತನಿಖೆಯಲ್ಲಿ ಕಲಬೆರಕೆ ತುಪ್ಪವನ್ನು ಪೂರೈಸುವ ಸಂಬಂಧ ಟಿಟಿಡಿ ಅಧಿಕಾರಿಗಳಿಗೆ 50 ಲಕ್ಷ ರೂಪಾಯಿ ಲಂಚ ಕೂಡ ನೀಡಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಂದಿನ ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಲೋಕಸಭಾ ಸಂಸದ ಮತ್ತು ಮಾಜಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರ ಆಪ್ತ ಸಹಾಯಕ ಕೆ. ಚಿನ್ನಪ್ಪಣ್ಣ, ಉತ್ತರ ಪ್ರದೇಶ ಮೂಲದ ಪ್ರೀಮಿಯರ್ ಅಗ್ರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಹವಾಲಾ ಏಜೆಂಟ್‌ಗಳಿಂದ ಆ ಮೊತ್ತವನ್ನು ನಗದು ರೂಪದಲ್ಲಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಚಿನ್ನಪ್ಪಣ್ಣ ದೆಹಲಿ ಮೂಲದ ಏಜೆಂಟ್ ಅಮನ್ ಗುಪ್ತಾ ಅವರಿಂದ 20 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಮತ್ತು ಉಳಿದ ಹಣವನ್ನು ಪ್ರೀಮಿಯರ್ ಅಗ್ರಿ ಫುಡ್ಸ್ ಹಿರಿಯ ಕಾರ್ಯನಿರ್ವಾಹಕ ವಿಜಯ್ ಗುಪ್ತಾ ಅವರಿಂದ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಎರಡೂ ವಹಿವಾಟುಗಳು ದೆಹಲಿಯ ಪಟೇಲ್ ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.
Advertisement